Local newsAccidentBlogCrime newsEconomyHighlightsHuman storiesLifestyleObituaryPoliticsState newsTop StoriesTrendingWomen Care

ಕುಂದಾಪುರ: ಚರ್ಚ್ ರಸ್ತೆಯಲ್ಲಿ ನಸುಕಿನ ಜಾವ ಶೂಟ್ಔಟ್! ಸ್ನೇಹಿತನಿಂದಲೇ ಮರ್ಡರ್!? ಆರೋಪಿ ಪರಾರಿ – ಪತ್ತೆಗೆ ಪೊಲೀಸ್ ಬಲೆ

Aware others:

ಕುಂದಾಪುರ: ಕರಾವಳಿ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ! ಹೆಬ್ರಿಯ ವ್ಯಕ್ತಿಯನ್ನು ಕುಂದಾಪುರದಲ್ಲಿ ಶೂಟ್ ಮಾಡಿ ಹತ್ಯೆಗೈಯಲಾಗಿದೆ. ಆ ಮೂಲಕ ಅಪರಾಧ ಜಗತ್ತಿಗೆ ಗುಂಡುಗಳ ಶಬ್ದವನ್ನು ಕುಂದಾಪುರದಿಂದಲೂ ಸೇರಿಸಲಾಗಿದೆ!

ಹೌದು. ಶುಕ್ರವಾರ ನಸುಕಿನ ಜಾವ ಸುಮಾರು 3.35ರ ಹೊತ್ತಿಗೆ ಕಾರಿನಲ್ಲಿ ಬಂದಿದ್ದ ವ್ಯಕ್ತಿಯನ್ನು ಕುಂದಾಪುರ – ಕೋಡಿ ಸಂಪರ್ಕಿಸುವ ಚರ್ಚ್ ರಸ್ತೆಯಲ್ಲಿರುವ ಚರ್ಚ್ ಮುಂಭಾಗದಲ್ಲಿಯೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಶೂಟೌಟ್ ನಲ್ಲಿ ಬಲಿಯಾದ ವ್ಯಕ್ತಿಯನ್ನು ಮೂಲತಃ ಹೆಬ್ರಿಯ ನಿವಾಸಿಯಾಗಿರುವ, ಪ್ರಸ್ತುತ ಬಾರ್ಕೂರಿನಲ್ಲಿ ವಾಸಿಸುತ್ತಿರುವ ಐವನ್ ರಿಚರ್ಡ್ ಮಸ್ಕರೇನಸ್ (45) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಪ್ರತ್ಯಕ್ಷ ಸಾಕ್ಷಿ ಲಲಿತ ಅವರ ಹೇಳಿಕೆಯಂತೆ ಕನ್ನಡಕುದ್ರು ನಿವಾಸಿ ಡೆರ್ರಿಕ್ (ಅಂದಾಜು 50 ವ) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಅವರ ಸ್ನೇಹಿತ ಕನ್ನಡಕುದ್ರು ನಿವಾಸಿ ಪ್ರಸ್ತುತ ಕುಂದಾಪುರದಲ್ಲಿರುವ ಪ್ಲ್ಯಾಟ್ ಒಂದರಲ್ಲಿರುವ ಡೆರ್ರಿಕ್ ಎಂಬಾತನ ನಡುವೆ ವ್ಯವಹಾರದ ಕಾರಣಕ್ಕೆ‌ ಮೊಬೈಲ್ ನಲ್ಲಿ ಮಾತುಕತೆ ನಡೆದಿದೆ. ಮಾತು ಜಗಳಕ್ಕೆ ತಿರುಗಿದ ಬಳಿಕ ಡೆರ್ರಿಕ್ ಐವನ್ ನನ್ನು ಕುಂದಾಪುರಕ್ಕೆ ಬರುವಂತೆ ಚಾಲೆಂಜ್ ಮಾಡಿದ ಹಿನ್ನೆಲೆಯಲ್ಲಿ ಐವನ್ ತನ್ನ ಎರಡನೇ ಪತ್ನಿ ಲಲಿತ ಜೊತೆಗೆ ಮತ್ತೊಬ್ಬ ಸ್ನೇಹಿತನ ಕಾರಿನಲ್ಲಿ ಬಂದಿದ್ದ. ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಸಂತ ಜೋಸೆಫರ ಶಾಲೆಯ ಮುಂಭಾಗದಲ್ಲಿ ಕಾರು ನಿಲ್ಲಿಸಿ, ಕಾರಿನಿಂದ ಇಳಿದಾಗ  ಥಾರ್ ಕಾರಿನಲ್ಲಿ ಬಂದ ಆರೋಪಿ ಡೆರಿಕ್  ಎಂಟ್ರಿಯಾಗಿದ್ದಾನೆ. ಇಬ್ಬರ ನಡುವೆ ಮತ್ತೆ ಜಗಳ ಆರಂಭಗೊಂಡಿದೆ. ಈ ಸಂದರ್ಭ ಲಲಿತ ಕಾರಿನಲ್ಲಿಯೇ ಇದ್ದರು. ಜಗಳ ತಾರಕಕ್ಕೇರಿದಾಗ ಡೆರ್ರಿಕ್ ತನ್ನೊಂದಿಗೆ ತಂದಿದ್ದ ಗನ್ ನಿಂದ ಸುಮಾರು 3.35ರ ಸುಮಾರಿಗೆ ಐವನ್ ರಿಚರ್ಡ್ ಮಸ್ಕರೇನಸ್ ಅವರ ಸೊಂಟದ ಭಾಗಕ್ಕೆ ಶೂಟ್ ಮಾಡಿದ್ದಾನೆ.  ಗನ್ ಶೂಟ್ ನಿಂದ ಗಂಭೀರ ಗಾಯಗೊಂಡ ಐವನ್ ರಿಚರ್ಡ್ ಮಸ್ಕರೇನಸ್ ರಸ್ತೆಯಲ್ಲಿಯೇ ಸಾವನ್ನಪ್ಪಿದ್ದಾರೆ. 

ತನ್ನ ಸ್ನೇಹಿತರೊಂದಿಗೆ ಮರಳು ದಂಧೆ, ಲ್ಯಾಂಡ್ ಲಿಂಕ್ಸ್ ವ್ಯವಹಾರ ನಡೆಸುತ್ತಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಅವರು ಮೂಲತಃ ಹೆಬ್ರಿಯವ. ಅವರಿಗೆ ಮೊದಲು ಒಂದು ವಿವಾಹವಾಗಿ ಮಕ್ಕಳಿದ್ದಾರೆ. ಬಳಿಕ ಬಾರ್ಕೂರಿನ ಲಲಿತಾ ಎಂಬಾಕೆಯನ್ನು ಜೊತೆಯಲ್ಲಿಟ್ಟುಕೊಂಡಿದ್ದರು. ಇಬ್ಬರೂ ಅನ್ಯೋನ್ಯವಾಗಿದ್ದರು ಎಂದು ಅವರ ಪರಿಚಯಸ್ಥರು ತಿಳಿಸಿದ್ದಾರೆ. ಹತ್ಯೆ ಸಂದರ್ಭವೂ ಲಲಿತಾ ಎಂಬುವವರು ಐವನ್ ಜೊತೆಗೆ ಕಾರಿನಲ್ಲಿದ್ದರು.  ಐವನ್ ಯಾನೆ ಮುನ್ನಾ ಈ ಹಿಂದೆ ಕುಕ್ಕಿಕಟ್ಟೆಯ ಪಿಟ್ಟಿ ನಾಗೇಶ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ.ಈತನ ಮೇಲೆ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಮುನ್ನಾ ಮೊದಲು ಪಿಟ್ಟಿ ನಾಗೇಶ್ ನ ಡೈವರ್ ಆಗಿದ್ದ. ಯಾವುದೋ ದ್ವೇಷದಿಂದ ಪಿಟ್ಟಿ ನಾಗೇಶ್ ಕೊಲೆಯಲ್ಲಿ ಭಾಗಿಯಾಗಿದ್ದ.ಪಿಟ್ಟಿ ನಾಗೇಶ್ ನ ತಂಡ ಈತನ ಹತ್ಯೆಗಾಗಿ ಕೆಲವು ಬಾರಿ ಸಂಚು ರೂಪಿಸಿತ್ತು.ಆದರೆ ಇಂದು ಮುನ್ನಾ ಕುಂದಾಪುರದಲ್ಲಿ ಕೊಲೆಯಾಗಿದ್ದಾನೆ. ವ್ಯವಹಾರ ದ್ವೇಷಗಳೇ ಹತ್ಯೆಗೆ ಕಾರಣವೇ? ಅಥವಾ ಕೌಟುಂಬಿಕ ಹಿನ್ನೆಲೆಗಳೇನಾದರೂ ಇದೆಯೇ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೋಕೋ ತಂಡ, ಎಫ್ ಎಸ್ ಎಲ್ ಪರಿಶೀಲನೆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!