ಬ್ರೇಕಿಂಗ್ ನ್ಯೂಸ್ – ಕುಂದಾಪುರದಲ್ಲಿ ಬೆಚ್ಚಿ ಬೀಳಿಸಿದ್ದ ಶೂಟ್ಔಟ್! ಆರೋಪಿ ಡೇರಿಕ್ ಕ್ರಾಸ್ತಾ ಪೊಲೀಸ್ ವಶಕ್ಕೆ! ಕೇವಲ 12 ಗಂಟೆಗಳೊಳಗೆ ಬಂಧಿಸಿದ ಪೊಲೀಸರು?
ಕುಂದಾಪುರ: ಜುಲೈ 31ರ ನಸುಕಿನ ಜಾವ 3.15ರ ಸುಮಾರಿಗೆ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಡೇರಿಕ್ ಬಂಧನವಾಗಿದೆ. ಘಟನೆ ನಡೆದು ಕೇವಲ 12 ಗಂಟೆಗಳ ಒಳಗೆ ಮರ್ಡರರ್ ಡೇರಿಕ್ ಕ್ರಾಸ್ತಾನನ್ನು ಪೊಲೀಸರು ಬೈಂದೂರು ಸಮೀಪ ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ನಸುಕಿನ ಜಾವ ಸುಮಾರು 3.15ರ ಹೊತ್ತಿಗೆ ಕುಂದಾಪುರ – ಕೋಡಿ ಸಂಪರ್ಕಿಸುವ ಚರ್ಚ್ ರಸ್ತೆಯಲ್ಲಿರುವ ಹೋಲಿ ರೊಸಾರಿಯೋ ಚರ್ಚ್ ಮುಂಭಾಗದಲ್ಲಿ ನಡು ರಸ್ತೆಯಲ್ಲಿ ಮರುಳು ಮಾಫಿಯಾ, ಸಿಗಡಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಐವನ್ ರಿಚರ್ಡ್ ಯಾನೇ ರೌಡಿ ಮುನ್ನಾನನ್ನು ಆತನ ಸ್ನೇಹಿತ, ವ್ಯವಹಾರಗಳ ಪಾಲುದಾರ ಡೇರಿಕ್ ಕ್ರಾಸ್ತಾ ಗುಂಡಿಕ್ಕಿ ಹತ್ಯೆಗೈದಿದ್ದ. ಬಳಿಕ ತಾನು ಬಂದಿದ್ದ ಥಾರ್ ಕಾರಿನಲ್ಲಿ ಪರಾರಿಯಾಗಿದ್ದ. ಬಳಿಕ ಬೈಂದೂರು ಸಮೀಪ ತಲೆ ಮರೆಸಿಕೊಂಡಿದ್ದ ಡೇರಿಕ್ ಬೇರೆ ದಾರಿ ಕಾಣದೇ ಪೊಲೀಸರಿಗೆ ಶರಣಾಗುವ ಯೋಚನೆ ಮಾಡಿದ್ದ ಎನ್ನಲಾಗಿದೆ. ಇದೇ ಸಂದರ್ಭ ಮಾಹಿತಿ ಪಡೆದ ಪೊಲೀಸರು ಆತನನ್ನು ಬೈಂದೂರಿನ ಗ್ರಾಮೀಣ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.

ಸಿಗಡಿ ವ್ಯವಹಾರ, ಮರಳು ದಂಧೆಗೆ ಸಂಬಂಧಿಸಿ ಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಹಣವನ್ನು ಆರೋಪಿ ಡೇರಿಕ್ ಮತ್ತವನ ಸ್ನೇಹಿತ ಹತ್ಯೆಗೀಡಾದ ಐವನ್ ಯಾನೇ ಮುನ್ನಾಗೆ ನೀಡಬೇಕಿದ್ದು, ಐವನ್ ಹಣಕ್ಕಾಗಿ ಇಬ್ಬರನ್ನೂ ಪೀಡಿಸುತ್ತಿದ್ದ. ಇದರಿಂದ ಡೇರಿಕ್ ಗೆ ಕಿರಿಕಿಯಾಗಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ ಮತ್ತೆ ಐವನ್ ಡೇರಿಕ್ ಗೆ ಫೋನ್ ಮಾಡಿ ಹಣಕ್ಕಾಗಿ ಪೀಡಿಸಿದ್ದ. ಕುಡಿದ ಅಮಲಿನಲ್ಲಿದ್ದ ಡೇರಿಕ್ ಹಾಗೂ ಐವನ್ ನಡುವೆ ವಾಗ್ವಾದ ನಡೆದು ಇಬ್ಬರೂ ತಮ್ಮ ಪ್ರತಿಷ್ಟೆಗಾಗಿ ಕಾದಾಡಲು ಸಿದ್ಧವಾಗಿದ್ದರು. ಧಮ್ ಇದ್ದರೆ ಕುಂದಾಪುರಕ್ಕೆ ಬಾ ಎಂದು ಲೊಕೇಶನ್ ಕಳಿಸಿದ್ದ ಡೇರಿಕ್ ನ ಸವಾಲನ್ನು ಸ್ವೀಕರಿಸಿದ್ದ ಐವನ್ ಒಂದು ಗನ್ ಹಾಗೂ ತಲವಾರ್ ಜೊತೆಗೆ ಸಿಯಾಜ್ ಕಾರಿನಲ್ಲಿ ಹೊರಟಾಗ ಎರಡನೇ ಹೆಂಡತಿ ಲಲಿತಾ ತಡೆದಿದ್ದಾಳೆ. ಆದರೆ ಐವನ್ ಒಪ್ಪದಿದ್ದಾಗ ಆತನ ಜೊತೆಗೆ ಲಲಿತಾ ಕಾರು ಹತ್ತಿದ್ದಾಳೆ.ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಸಂತ ಜೋಸೆಫರ ಶಾಲೆಯ ಮುಂಭಾಗದ ರಸ್ತೆಯಲ್ಲಿ ಸುಮಾರು 3.15ರ ಸುಮಾರಿಗೆ ಕಾರು ನಿಲ್ಲಿಸಿ ಮತ್ತೆ ಜಗಳ ಆರಂಭಗೊಂಡಿದೆ. ಈ ಸಂದರ್ಭ ಲಲಿತ ಕಾರಿನಲ್ಲಿಯೇ ಇದ್ದರು. ಜಗಳ ತಾರಕಕ್ಕೇರಿದಾಗ ಡೆರ್ರಿಕ್ ತನ್ನೊಂದಿಗೆ ತಂದಿದ್ದ ಡಬಲ್ ಬ್ಯಾರೆಲ್ ಗನ್ ನಿಂದ ಐವನ್ ನ ತೊಡೆ ಭಾಗಕ್ಕೆ ಶೂಟ್ ಮಾಡಿದ್ದಾನೆ. ಗನ್ ಶೂಟ್ ನಿಂದ ಗಂಭೀರ ಗಾಯಗೊಂಡ ಐವನ್ ರಿಚರ್ಡ್ ಮಸ್ಕರೇನಸ್ ರಸ್ತೆಯಲ್ಲಿಯೇ ಸಾವನ್ನಪ್ಪಿದ್ದ. ಬಳಿಕ ಡೇರಿಕ್ ತನ್ನ ಥಾರ್ ಕಾರಿನಲ್ಲಿ ಪರಾರಿಯಾಗಿದ್ದ.

ಇದೀಗ ಡೇರಿಕ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕಾಲಿಗೆ ಗುಂಡು ಹೊಡೆಯಲೆಂದು ಡಬಲ್ ಬ್ಯಾರೆಲ್ ಗನ್ ನಿಂದ ಶೂಟ್ ಮಾಡಿದ್ದೆ. ಆದರೆ ಅದು ಸ್ವಲ್ಪ ಮೇಲಕ್ಕೆ ತಾಗಿದೆ. ಅವನನ್ನು ಕೊಲ್ಲುವ ಉದ್ಧೇಶ ಇರಲಿಲ್ಲ. ದಿನನಿತ್ಯ ಟಾರ್ಚರ್ ತಡೆಯಲಾರದೇ ಬರ ಹೇಳಿದ್ದೆ. ಆತ ಬರುತ್ತಾನೆ ಅಂದುಕೊಂಡಿರಲಿಲ್ಲ. ಬಂದಾಗ ಏನು ಮಾಡಬೇಕೆಂದು ತಿಳಿಯದೇ ಶೂಟ್ ಮಾಡಿದ್ದೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.
