ದ್ವೇಷ ಭಾಷಣದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹದ್ದು ಮೀರಿದ್ದಾರೆ – ಕಾನೂನು ಉತ್ತರಿಸುತ್ತದೆ : ಚಂದ್ರಶೇಖರ್ ಶೆಟ್ಟಿ ಆಕ್ರೋಶ

ಕುಂದಾಪುರ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ, ಅದನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ (28 ಜುಲೈ 2026) ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಅತ್ಯಂತ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಭಾಷಣದ ವಿಡಿಯೋ ಸಾಕ್ಷ್ಯವು ಸಾರ್ವಜನಿಕವಾಗಿ ಲಭ್ಯವಿದೆ. ಆದ್ದರಿಂದ ಈ ಪ್ರಕರಣವನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ, ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಐಟಿ ಸೆಲ್ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.
ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು “24 ಗಂಟೆಗಳ ಕಾಲ ಡ್ರಗ್ಸ್ ನಶೆಯಲ್ಲಿರುತ್ತಾರೆ” ಎಂಬ ನಿರಾಧಾರ ಹಾಗೂ ಮಾನಹಾನಿಕರ ಆರೋಪ ಮಾಡಿರುವುದು ಮತ್ತು “ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿರುವುದು ಅತ್ಯಂತ ಗಂಭೀರ, ಖಂಡನೀಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಸಂವಿಧಾನಕ್ಕೆ ಪ್ರಮಾಣವಚನ ಸ್ವೀಕರಿಸಿರುವ ಶಾಸಕರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ದ್ವೇಷಪೂರಿತ ಮತ್ತು ಹಿಂಸೆಯನ್ನು ಪ್ರಚೋದಿಸುವ ಭಾಷೆಯನ್ನು ಬಳಸಿರುವುದು ಅವರ ಹುದ್ದೆಯ ಘನತೆಗೆ ತಕ್ಕದ್ದಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಚರ್ಚೆ ಮತ್ತು ವಾದ-ಪ್ರತಿವಾದಗಳ ಮೂಲಕ ಎದುರಿಸಬೇಕು. ವ್ಯಕ್ತಿ ಅಥವಾ ಕುಟುಂಬವನ್ನು ಗುರಿಯಾಗಿಸಿ ಬೆದರಿಕೆ ಹಾಕುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ.
ಭಾರತದ ಸಂವಿಧಾನದ ಅನುಚ್ಛೇದ 21 ಪ್ರತಿಯೊಬ್ಬ ನಾಗರಿಕನ ಜೀವ ಹಾಗೂ ಘನತೆಯ ಹಕ್ಕನ್ನು ರಕ್ಷಿಸುತ್ತದೆ. ಅನುಚ್ಛೇದ 19(2) ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಿದ್ದು, ಹಿಂಸೆಗೆ ಪ್ರಚೋದನೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಮತ್ತು ಇತರರ ಹಕ್ಕುಗಳಿಗೆ ಹಾನಿಯಾಗುವ ಹೇಳಿಕೆಗಳಿಗೆ ಕಾನೂನು ಅವಕಾಶ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಯಶ್ಪಾಲ್ ಸುವರ್ಣ ಅವರ ಹೇಳಿಕೆಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ.
ಅದೇ ರೀತಿ, ಯಾವುದೇ ಪುರಾವೆ ಇಲ್ಲದೆ ಒಬ್ಬ ರಾಷ್ಟ್ರೀಯ ನಾಯಕನನ್ನು “ಡ್ರಗ್ಸ್ ವ್ಯಸನಿ” ಎಂದು ಸಾರ್ವಜನಿಕವಾಗಿ ಕರೆಯುವುದು ಮಾನಹಾನಿಕರ ಹಾಗೂ ಬೇಜವಾಬ್ದಾರಿಯುತ ವರ್ತನೆಯಾಗಿದೆ. ಜನಪ್ರತಿನಿಧಿಗಳ ಮಾತುಗಳು ಸಮಾಜದ ಮೇಲೆ ಪರಿಣಾಮ ಬೀರುವುದರಿಂದ ಅವರು ಹೆಚ್ಚು ಸಂಯಮ ಮತ್ತು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.
ಈ ದ್ವೇಷಪೂರಿತ, ಬೆದರಿಕೆ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಸಂಬಂಧ ಕಾಂಗ್ರೆಸ್ ಕಾನೂನು ಘಟಕವು ಲಭ್ಯವಿರುವ ಎಲ್ಲಾ ಕಾನೂನು ಅವಕಾಶಗಳನ್ನು ಪರಿಶೀಲಿಸಿ, ಸಂವಿಧಾನ ಮತ್ತು ದೇಶದ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಹೋರಾಟಕ್ಕೆ ಸಜ್ಜಾಗಬೇಕಿದೆ. ದ್ವೇಷ ಭಾಷಣ ಮಾಡುವ ಯಾರೇ ಆಗಿರಲಿ, ಅವರು ಕಾನೂನಿಗಿಂತ ಮೇಲಲ್ಲ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಜೊತೆಗೆ, ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಹಾಗೂ ರಾಜ್ಯಾದ್ಯಂತ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಯಶ್ಪಾಲ್ ಸುವರ್ಣ ಅವರ ವಿರುದ್ಧ ಪ್ರತ್ಯೇಕ ದೂರುಗಳನ್ನು ದಾಖಲಿಸುವ ಮೂಲಕ ಕಾನೂನು ಹೋರಾಟವನ್ನು ಆರಂಭಿಸಬೇಕಿದೆ. ಇದು ಕೇವಲ ಒಬ್ಬ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ; ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಯನ್ನು ರಕ್ಷಿಸುವ ಹೋರಾಟವಾಗಿದೆ. ಈ ಮೂಲಕ ದ್ವೇಷದ ರಾಜಕಾರಣಕ್ಕೆ ಸಂವಿಧಾನ ಮತ್ತು ಕಾನೂನಿನ ಮೂಲಕವೇ ಉತ್ತರ ನೀಡುವ ಸ್ಪಷ್ಟ ಸಂದೇಶವನ್ನು ರಾಜ್ಯದಾದ್ಯಂತ ರವಾನಿಸಬೇಕಿದೆ.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಉತ್ತರ ಹಿಂಸೆಯ ಬೆದರಿಕೆ ಅಲ್ಲ; ಕಾನೂನೇ ಉತ್ತರ. ಯಾರೇ ಆಗಿರಲಿ, ಕಾನೂನಿಗಿಂತ ದೊಡ್ಡವರಲ್ಲ ಎಂದು ಚಂದ್ರಶೇಖರ್ ಶೆಟ್ಟಿ ಎಚ್ಚರಿಸಿದ್ದಾರೆ.
