ಕೆ.ಸಿ ಕುಂದರ್ ಸ್ಮರಣಾರ್ಥ ಹತ್ತು ದಿನಗಳ ಬೇಸಿಗೆ ಶಿಬಿರ ಉದ್ಘಾಟನೆ
ಕಾರಂತ ಥೀಂ ಪಾಕ್೯ ಬೇಸಿಗೆ ಶಿಬಿರ ವಿಶಿಷ್ಟ, ಅರ್ಥಪೂರ್ಣ- ಪತ್ರಕರ್ತ ರವೀಂದ್ರ ಕೋಟ
ಕೋಟ: ಶಿಬಿರಗಳು ಎಲ್ಲೆಡೆ ನಡೆಯುವುದು ಸ್ವಾಭಾವಿಕ ಆದರೆ ಇಲ್ಲಿನ ಕಾರಂತ ಥೀಂ ಪಾಕ್೯ ನಲ್ಲಿ ನಡೆಯುವ ಬೇಸಿಗೆ ಶಿಬಿರಗಳು ವಿಭಿನ್ನ ಮತ್ತು ಮಕ್ಕಳ ಮನೋವಿಕಾಸಕ್ಕೆ ಸಹಕಾರಿ ಪ್ರಸ್ತುತ ಮೊಬೈಲ್ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಬಿರಗಳ ಮೂಲಕ ಕೌಶಲ್ಯಾಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಿದೆ. ಇಂದಿನ ತಾಪಮಾನದಲ್ಲಿ ಹಸಿರು ಪರಿಸರ,ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಯುವ ಸಮುದಾಯ ಮನಸ್ಸು ಮಾಡಬೇಕು ಎಂದು ಪತ್ರಕರ್ತ ರವೀಂದ್ರ ಕೋಟ ಅಭಿಪ್ರಾಯಪಟ್ಟರು.

ಏ.25ರಿಂದ ಮೇ 4ರವರೆಗೆ ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ ಮಣೂರು ಪಡುಕೆರೆ ಗೀತಾನಂದ ಫೌಂಡೇಶನ್, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟ ಉಸಿರು, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಆಶ್ರಯದಲ್ಲಿ ದಿ.ಕೆ.ಸಿ.ಕುಂದರ್ ಸ್ಮರಣಾರ್ಥ 26ನೇ ವರ್ಷದ ವಿದ್ಯಾರ್ಥಿಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ವೇಳೆ ಶಿಬಿರಾರ್ಥಿಗಳ ನಾಯಕರಾದ ಪ್ರಥ್ವಿ, ಧನುಶ್ರೀ, ಚಿರಂತನ್, ಶಮಂತ್, ತನ್ವಿ ಇವರಿಗೆ ಶಿಬಿರದ ಫೈಲ್ ಹಸ್ತಾಂತರಿಸಿದರು. ಶಿವರಾಮ ಕಾರಂತ ಪ್ರತಿಷ್ಠಾನದ ಸದಸ್ಯ ಎಂ ಸುಬ್ರಾಯ ಆಚಾರ್, ಥೀಂ ಪಾಕ್೯ ಗ್ರಂಥಪಾಲಕಿ ಶೈಲಜ, ಕಲ್ಮಾಡಿ ಅಂಗನವಾಡಿ ಸಹಾಯಕಿ ಶೈಲಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ, ಪ್ರತಿಷ್ಠಾನದ ಕಾರ್ಯದರ್ಶಿ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ, ಸದಸ್ಯ ಶಿಕ್ಷಕ ಸತೀಶ್ ವಡ್ಡರ್ಸೆ ಸ್ವಾಗತಿಸಿ ವಂದಿಸಿದರು.
