ಸಿದ್ದಾಪುರ: ಸರಸ್ವತಿ ವಿದ್ಯಾಲಯಕ್ಕೆ ಅತ್ಯುನ್ನತ ಗುಣಮಟ್ಟದ ಫಲಿತಾಂಶ, ಎರಡು ರ್ಯಾಂಕ್ – ಆಡಳಿತ ಮಂಡಳಿಯಿಂದ ಸನ್ಮಾನ

ಕುಂದಾಪುರ: ಸಿದ್ದಾಪುರದ ಸರಸ್ವತಿ ವಿದ್ಯಾಲಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ ಎಂದು ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಹೇಳಿದ್ದಾರೆ. ಅವರು ಶುಕ್ರವಾರ ಸರಸ್ವತಿ ವಿದ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.


201ರಲ್ಲಿ ದಕ್ಕೇರಬಾಳು ಶ್ರೀನಿವಾಸ ಕಾಮತ್ ಅವರು ವೆಂಕಟರಮಣ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ಸ್ಥಾಪಿಸಿದ ಸರಸ್ವತಿ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢ ಶಾಲೆಯನ್ನು 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಮುನ್ನಡೆಸುತ್ತಿದೆ. ನಿರಂತರವಾದ ಅಧ್ಯಯನ, ಅನುಭವಿ ಆಡಳಿತ ಮಂಡಳಿ ಹಾಗೂ ಮುಖ್ಯೋಪಾದ್ಯಾಯರು, ಉತ್ತಮ ಬೋಧಕ ವೃಂದ, ಸುಸಜ್ಜಿತ ಶಾಲಾ ಸೌಲಭ್ಯಗಳಿಂದಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 35 ವಿದ್ಯಾರ್ಥಿಗಳು ಪಾಲ್ಗೊಂಡು ಶೇ. 100 ಫಲಿತಾಂಶದ ಜೊತೆಗೆ ಇಬ್ಬರು ರಾಜ್ಯ ಮಟ್ಟದ ರ್ಯಾಂಕ್ ಪಡೆದಿದ್ದಾರೆ ಎಂದರು.


ಪರೀಕ್ಷೆಗೆ ಕುಳಿತವರ ಪೈಕಿ ಶಿವಾನಿ ಶೆಟ್ಟಿ 617 ಅಂಕಗಳನ್ನು ಪಡೆದು ಶೇ. 98.72 ಫಲಿತಾಂಶದ ಜೊತೆಗೆ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. ಇನ್ನೊಬ್ಬಳು ವಿದ್ಯಾರ್ಥಿನಿ ಆಯಿಷಾ ತನಾಝ್ 616 ಅಂಕಗಳನ್ನು ಪಡೆದು ಶೆ. 98.56 ಫಲಿತಾಂಶದೊಂದಿಗೆ ರಾಜ್ಯಕ್ಕೆ 10 ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ. 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೆ. 95.48 ಗುಣಾತ್ಮಕ ಫಲಿತಾಂಶದೊಂದಿಗೆ ಉತ್ತಮ ಫಲಿತಾಂಶ ಬಂದಿರುವುದು ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಹಾಗೂ ಎರಡನೇ ಪರೀಕ್ಷೆಗೆ ಹಾಜರಾಗುವ ತಯಾರಿ ನಡೆಸುತ್ತಿದ್ದು, ಹೆಚ್ಚಿನ ಫಲಿತಾಂಶ ನಿರೀಕ್ಷಿಸುತ್ತಿದ್ದೇವೆ ಎಂದರು.




ನಮ್ಮ ಶಾಲೆಯಲ್ಲಿ ಸುಸಜ್ಜಿತ ಸೌಲಭ್ಯಗಳು, ಲ್ಯಾಬೊರೇಟರಿಗಳು, ಗ್ರಂಥಾಲಯ, ಆಟದ ಮೈದಾನ, ತರಗತಿ ಕೋಣೆಗಳನ್ನು ಹೊಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಕೂಲ್ ಬಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಅನುಭವಿ ಮತ್ತು ನುರಿತ ಶಿಕ್ಷಕರನ್ನು ನಮ್ಮ ಶಾಲೆ ಹೊಂದಿದೆ. ಮುಖ್ಯೋಪಾದ್ಯಾಯಿನಿ ಶ್ವೇತಾ ಗಣೇಶ್ ಅವರು ಶಾಲೆಯನ್ನು ಮುನ್ನಡೆಸುವ ಸಾರಥ್ಯವನ್ನು ವಹಿಸಿದ್ದಾರೆ. ಸರಸ್ವತಿ ವಿದ್ಯಾಲಯವು 25ನೇ ವರ್ಷಕ್ಕೆ ಕಾಲಿರಿಸಿದ್ದು ನರ್ಸರಿಯಿಂದ 10ನೇ ತರಗತಿಯವರೆಗೆ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪ್ರತಿ ವರ್ಷವೂ ಎಸ್‍ಎಸ್‍ಎಲ್‍ಸಿ ಬ್ಯಾಚ್ 100% ಫಲಿತಾಂಶವನ್ನು ಪಡೆಯುತ್ತಾ ಬಂದಿದೆ ಎಂದರು.



ಉತ್ತಮ ಗುಣಮಟ್ಟದ ಶಿಕ್ಷಣ, ನುರಿತ ಅದ್ಯಾಪಕ ವೃಂದದ ಜೊತೆಗೆ ಈ ವರ್ಷ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನೂ ಮಕ್ಕಳಿಗೆ ಕಲ್ಪಿಸಲಾಗಿದೆ. ಸಿಂಗಲ್ ಪೇರೆಂಟ್ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲಾ ವಾಹನ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಊಟ, ವಿಶಾಲವಾದ ಆಟದ ಮೈದಾನ, ಸುಸಜ್ಜಿತ ಪ್ರಯೋಗಾಲಯಗಳು, ಒಳಂಗಣ ಕ್ರೀಡಾಂಗಣ, ವಿಶೇಷ ಕೋಚಿಂಗ್ ಸೌಲಭ್ಯ ವ್ಯವಸ್ಥೆ ಒದಗಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಒದಗಿಸಲಾಗುತ್ತಿದ್ದು, ಈಗಾಗಲೇ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ ಎಂದು ತಿಳಿಸಿದರು.


ಜ್ಞಾನಸರಸ್ವತಿ ಪುಯು ಆಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಮಾತನಾಡಿ, ನರ್ಸರಿಯಿಂದ 8 ನೇ ತರಗತಿ ವರೆಗಿನ ಸಂಯೋಜಿತ ಕ್ಯಾಂಪಸ್ CBSE ಶಾಲೆ, ಸ್ಟೇಟ್ ಬೋರ್ಡ್ ಸ್ಕೂಲ್ ಮತ್ತು ಪಿಯು ಕಾಲೇಜು (ವಿಜ್ಞಾನ ಮತ್ತು ವಾಣಿಜ್ಯ) ಗಳಿಗೆ ನೆಲೆಯಾಗಿದೆ. ಹೈಬ್ರಿಡ್ ಶಿಕ್ಷಣದ ಮೂಲಕ ನುರಿತ ಖಾಯಂ ಉಪನ್ಯಾಸಕರ ತಂಡವು ಅತ್ಯುನ್ನತ ಶಿಕ್ಷಣ ಪದ್ಧತಿಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುತ್ತದೆ ಎಂದರು.


ಇದೇ ಸಂದರ್ಭ 617 ಅಂಕಗಳನ್ನು ಪಡೆದು ಶೇ. 98.72 ಅಂಕ ಗಳಿಸಿ 9ನೇ ರ್ಯಾಂಕ್ ಪಡೆದ ಶಿವಾನಿ ಶೆಟ್ಟಿ ಹಾಗೂ 616 ಅಂಕಗಳನ್ನು ಪಡೆದು ಶೆ. 98.56 ಫಲಿತಾಂಶದೊಂದಿಗೆ ರಾಜ್ಯಕ್ಕೆ 10 ನೇ ರ್ಯಾಂಕ್ ಪಡೆದ ಆಯಿಷಾ ತನಾಝ್ ಅವರಿಗೆ ತಲಾ 25 ಸಾವಿರ ರೂಪಾಯಿಗಳ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸರಸ್ವತಿ ವಿದ್ಯಾಲಯದ ಮುಖ್ಯೋಪಾದ್ಯಾಯಿನಿ ಶ್ವೇತಾ ಗಣೇಶ್ ಸ್ವಾಗತಿಸಿ ವಂದಿಸಿದರು.
