ಭಜಕ, ಭಾಗವತ ಪ್ರಶಾಂತ್ ಪಡುಕರೆಗೆ ಕಡಲೂರ ಸನ್ಮಾನ
ಕರಾವಳಿ ಸಂಘಸಂಸ್ಥೆಗಳ ತಾಣ- ಎಚ್ ಸುಜಯೀಂದ್ರ ಹಂದೆ
ಕೋಟ: ನಮ್ಮ ದೇಶ ಸಾಂಸ್ಕೃತಿಕವಾಗಿ ಗಟ್ಟಿ ನೆಲೆಯಾಗಿ ಕಲಾವಿದರ ಸೃಷ್ಠಿಯ ತಾಣವಾಗಿದೆ. ದೇಶದ ಯಾವುದೇ ವ್ಯವಸ್ಥೆಯನ್ನು ಹಾಳುಗೆಡವಬಹುದು. ಆದರೆ ಇಲ್ಲಿನ ಸಂಸ್ಕ್ರತಿ ನಾಶಮಾಡಲು ಯಾರಿಂದಲೂ ಸಾಧ್ಯವಿಲ ಇದು ಶ್ರೀಮಂತ ಪರಂಪರೆಯ ದೇಶವಾಗಿದೆ,ಕರಾವಳಿ ಸಂಘ ಸಂಸ್ಥೆಗಳ ತವರೂರಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳಿಗೆ ವೇದಿಕೆ ಕಲ್ಪಿಸಿದೆ ಎಂದು ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್.ಸುಜಯೀಂದ್ರ ಹಂದೆ ಹೇಳಿದರು. ಕೋಟತಟ್ಟು ಪಡುಕರೆ ಅರಮ ದೇಗುಲದ ಸಮೀಪ ಟೀಮ್ ಭವಾಬ್ಧಿ ಪಡುಕರೆ ಇವರ ಐದನೇ ವರ್ಷದ ವರ್ಷೋತ್ಸವ ಕಡಲೂರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವೇಳೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ರವರು ಭಾಗವತ,ಭಜಕ ಪ್ರಶಾಂತ್ ಪಡುಕರೆಯವರಿಗೆ ಕಡಲೂರ ಸನ್ಮಾನ ನೀಡಿ ಗೌರವಿಸಿದರು. ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ವಾಟರ್ ಫಿಲ್ಟರ್ ನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಟೀಮ್ ಭವಾಬ್ಧಿ ಪ್ರಮುಖ ಶಿವಾನಂದ ಕುಂದರ್ ವಹಿಸಿದ್ದರು. ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಆಡಳಿತ ವೈದ್ಯ ಡಾ.ಪ್ರಕಾಶ್ ಸಿ ತೋಳಾರ್, ಕೋಟ ಸಹಕಾರಿ ವ್ಯವಸಾಯಕ ಸಂಘದ ಉಪಾಧ್ಯಕ್ಷ ಎಚ್ ನಾಗರಾಜ್ ಹಂದೆ, ಕೋಟತಟ್ಟು ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಹಂದಟ್ಟು, ಮಣೂರು ಮೀನಗಾರರ ಪ್ರಾಥಮಿಕ ಸಂಘದ ಅಧ್ಯಕ್ಷ ರಾಮ ಬಂಗೇರ ಉಪಸ್ಥಿತರಿದ್ದರು. ಟೀಮ್ ಭವಾಬ್ಧಿಯ ದೇವೇಂದ್ರ ಶ್ರೀಯಾನ್ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿ ವಂದಿಸಿದರು. ರವೀಂದ್ರ ತಿಂಗಳಾಯ ಕಾರ್ಯಕ್ರಮ ಸಂಯೋಜಿಸಿದರು. ಹನುಮಗಿರಿ ಮೇಳದ ಕಲಾವಿದರಿಂದ ವರ್ಣ ಪಲ್ಲಟ ಯಕ್ಷಗಾನ ಪ್ರದರ್ಶನಗೊಂಡಿತು.
