ಕುಂದಾಪುರ: ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಅಸಂವಿಧಾನಿಕ – ಪಂಚಾಯತ್ ರಾಜ್ ಒಕ್ಕೂಟ ಖಂಡನೆ
ಕುಂದಾಪುರ: ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನಿರಂತರವಾಗಿ ಗ್ರಾಮಸ್ವರಾಜ್ಯಕ್ಕೆ ಆಘಾತ ನೀಡುತ್ತಲೇ ಬರುತ್ತಿವೆ. ಇದೀಗ ಮತ್ತೆ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿದ್ದಲ್ಲದೇ ಕಾನೂನು ಬಾಹಿರವಾಗಿ ಆಡಳಿತಾಧಿಕಾರಿಗಳನ್ನು ನೇಮಿಸುವ ಮೂಲಕ ರಾಜ್ಯ ಸರ್ಕಾರ ಪಮಚಾಯತ್ ರಾಜ್ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಿದರೆ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹೆಸರು ಬದಲಾಯಿಸುವ ನೆಪದಲ್ಲಿ ವಿಬಿಜಿರಾಮ್ ಜಿ ಹೆಸರಿನಲ್ಲಿ ಕೇಂದ್ರ ಸರ್ಕಾರವು ಗ್ರಾಮ ಸಭೆ ಹಾಗೂ ಸ್ಥಳೀಯ ಸರ್ಕಾರಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಆಕ್ರೋಶ ಹೊರಹಾಕಿದೆ.

ಶುಕ್ರವಾರ ಬೆಳಿಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಅಡಿಕೆಕೊಡ್ಲು ಉದಯಕುಮಾರ್ ಶೆಟ್ಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಸ್ವರಾಜ್ಯ ವ್ಯವಸ್ಥೆ ಮೇಲೆ ನಡೆಸುತ್ತಿರುವ ಪ್ರಹಾರಗಳ ವಿರುದ್ಧ ಹರಿಹಾಯ್ದರು. ಪಂಚಾಯತ್ ಚುನಾವಣೆಯನ್ನು ಸಕಾಲದಲ್ಲಿ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಪ್ರಾಥಮಿಕ ಕರ್ತವ್ಯ, ಮತ್ತು ಅದಕ್ಕೆ ಅಗತ್ಯವಿರುವ ಎಲ್ಲಾ ನೀಡುವುದು ರಾಜ್ಯ ಸಂವಿಧಾನಾತ್ಮಕ ಪ್ರಕ್ರಿಯೆಗಳಿಗೆ ಜವಾಬ್ದಾರಿ. ಚುನಾವಣೆ ನಡೆಸಲು ವಿಫಲವಾದುದಕ್ಕೆ ಪರಿಹಾರವಾಗಿ ಆಡಳಿತಾಧಿಕಾರಿ ನೇಮಕ ಮಾಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದ ಅವರು, ರಾಜ್ಯ ಸರ್ಕಾರದ ಈ ನಡೆಯಿಂದಾಗಿ ಗ್ರಾಮ ಪಂಚಾಯತ್ ಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಾದ 15ನೇ ಹಣಕಾಸು ಅನುದಾನಕ್ಕೂ ಹೊಡೆತ ಬಿದ್ದಿದೆ. ಒಂದು ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸದಿದ್ದಲ್ಲಿ, ಕೇಂದ್ರ ಸರ್ಕಾರ ಅನುದಾನವನ್ನು ತಡೆಹಿಡಿಯುತ್ತದೆ. ಇದರಿಂದ ಮತ್ತೆ ಗ್ರಾಮಸ್ವರಾಜ್ಯದ ಕನಸಿಗೆ ಕೊಳ್ಳಿ ಇಟ್ಟಂತಾಗುತ್ತದೆ ಎಂದರು.
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂ.ಜಿ.ಎನ್.ಆರ್.ಇ.ಜಿ.ಎ ಅಡಿಯಲ್ಲಿ ಉದ್ಯೋಗವು ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕಾನೂನು ಹಕ್ಕಾಗಿತ್ತು ಆದರೆ ಹೊಸ ‘ವಿಬಿಜಿ ರಾಮ ಜೀ ಮಸೂದೆ’ಯ ಪ್ರಕರಣ 5(1) ಹಾಗೂ ಅನುಬಂಧ 1 ಪ್ರಕರಣ 5 (3)ರ ಪ್ರಕಾರ ಕೇಂದ್ರ ಸರ್ಕಾರವು ಸೂಚಿಸಬಹುದಾದ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ, ರಾಜ್ಯ ಸರ್ಕಾರವು, ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿರುವ ವಯಸ್ಕ ಸದಸ್ಯರ ಪ್ರತಿಯೊಂದು ಕುಟುಂಬಕ್ಕೆ, ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 125 ದಿನಗಳ ಖಾತರಿಯ ಉದ್ಯೋಗವನ್ನು ಒದಗಿಸಬೇಕು ಎನ್ನುವ ಮೂಲಕ ಉದ್ಯೋಗದ ಹಕ್ಕು ಸಾರ್ವತ್ರಿಕತೆಯನ್ನು ಕಳೆದುಕೊಂಡು, ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಿದಂತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಆದ್ದರಿಂದ ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಆದೇಶವನ್ನು ತಕ್ಷಣ ರದ್ದುಗೊಳಿಸಿ, ಸಂವಿಧಾನಬದ್ಧವಾಗಿ ತಕ್ಷಣವೇ ಚುನಾವಣೆ ನಡೆಸಬೇಕು. ಗ್ರಾಮ ಸಭಾ ಹಾಗೂ ಸ್ಥಳೀಯ ಸರ್ಕಾರಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಅಂಶಗಳನ್ನು ‘ವಿಬಿಜಿ ರಾಮ ಜೀ’ ಕಾಯಿದೆಯಿಂದ ತಕ್ಷಣವೇ ಹಿಂಪಡೆಯಬೇಕು ಮತ್ತು ಗ್ರಾಮಸಭೆ ಹಾಗೂ ಗ್ರಾಮ ಪಂಚಾಯತ್‌ಗಳ ಸಂವಿಧಾನಾತ್ಮಕ ಅಧಿಕಾರವನ್ನು ಪುನರ್ ಸ್ಥಾಪಿಸಬೇಕು ಎಂದು ಅವರ ಆಗ್ರಹಿಸಿದರು. ಅಂಪಾರು ಕಿರಣ್ ಹೆಗ್ಡೆ, ವಕ್ವಾಡಿ ರಮೇಶ್ ಶೆಟ್ಟಿ, ಕೃಪಾ ಮೊದಲಾದವರು ಉಪಸ್ಥಿತರಿದ್ದರು.
