ವಾಸ್ತವ.ಕಾಮ್ ವರದಿ ಇಂಪ್ಯಾಕ್ಟ್ – ವರದಿಗೆ ಎಚ್ಚೆತ್ತುಕೊಂಡ ಮೆಸ್ಕಾಂ ಇಲಾಖೆ
ಶುಕ್ರವಾರ ಬೆಳ್ಳಂಬೆಳಿಗ್ಗೆ ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿಗೆ ಚಾಲನೆ
ಕುಂದಾಪುರ: ಕುಂದಾಪುರದ ಬಸ್ರೂರು ಸಮೀಪದ ಬಸ್ರೂರು -ಹುಣ್ಸೆಮಕ್ಕಿ (ಬಿ.ಹೆಚ್) ಜಂಕ್ಷನ್ ನಲ್ಲಿ ಅಪಾಯ ಅಹ್ವಾನಿಸುವ ವಿದ್ಯುತ್ ಕಂಬದ ಬಗ್ಗೆ ಗುರುವಾರ ವಾಸ್ತವ.ಕಾಮ್ ಬಿತ್ತರಿಸಿದ ವರದಿಗೆ ಕುಂದಾಪುರ ಮೆಸ್ಕಾಂ ಎಚ್ಚೆತ್ತುಕೊಂಡಿದೆ. ಶುಕ್ರವಾರ ಬೆಳಿಗ್ಗೆ ಮೆಸ್ಕಾಂ ಅಧಿಕಾರಿಗಳು ರಸ್ತೆಯ ಬದಿಯಲ್ಲಿ ಹೊಸ ವಿದ್ಯುತ್ ಕಂಬ ನೆಟ್ಟಿದ್ದು, ಹಳೆಯ ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕುಂದಾಪುರದ ಬಸ್ರೂರು ಮೂರುಕೈನಿಂದ ಸಿದ್ಧಾಪುರಕ್ಕೆ ಹೋಗುವ ರಸ್ತೆಯಲ್ಲಿ ಈ ಬಿಹೆಚ್ ಜಂಕ್ಷನ್ ಸಿಗುತ್ತದೆ. ಈ ಜಂಕ್ಷನ್ ಸಿದ್ದಾಪುರ, ಹುಣ್ಸೆಮಕ್ಕಿ ಮತ್ತು ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ವೃತ್ತವಾಗಿದ್ದು, ಬಸ್ರೂರು ಮೂರುಕೈ-ಸಿದ್ಧಾಪುರ ರಸ್ತೆ ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಹೆಚ್ ರಸ್ತೆ ಅಗಲೀಕರಣಗೊಳ್ಳುತ್ತಿದ್ದ ಸಂದರ್ಭ ಹಳೆಯ ವಿದ್ಯುತ್ ಕಂಬ ತೆರವುಗೊಳಿಸದೇ ಡಾಂಬರೀಕರಣ ನಡೆದಿತ್ತು. ಇದರಿಂದ ಅಪಘಾತ ಸಂಭವ ಸಾಧ್ಯತೆಯಿತ್ತು.

ಸಾರ್ವಜನಿಕರು ಮೆಸ್ಕಾಂ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ವಿರುದ್ಧ ವಾಸ್ತವ.ಕಾಮ್ ಮೂಲಕ ಆಕ್ರೋಶ ಹೊರಹಾಕಿದ್ದರು. ಮೆಸ್ಕಾಂ ಸ್ಪಂದನೆಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ವಾಸ್ತವ.ಕಾಮ್ ಶ್ಲಾಘಿಸಿದೆ.
