ಮೆಸ್ಕಾಂ ನಿರ್ಲಕ್ಷ್ಯವೋ.. ಗುತ್ತಿಗೆದಾರರ ಆತುರವೋ.. ಬಿಹೆಚ್ ನಲ್ಲಿ ಅಪಾಯ ಅಹ್ವಾನಿಸುತ್ತಿದೆ ವಿದ್ಯುತ್ ಕಂಬ!?
ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ, ವಾಸ್ತವ.ಕಾಮ್
ಕುಂದಾಪುರ: ಇಲ್ಲಿಗೆ ಸಮೀಪದ ಬಸ್ರೂರು -ಹುಣ್ಸೆಮಕ್ಕಿ (ಬಿ.ಹೆಚ್) ಜಂಕ್ಷನ್ ತಿರುವು ಅಪಾಯ ಅಹ್ವಾನಿಸುವ ಕೇಂದ್ರವಾಗಿ ಪರಿಣಮಿಸಿದೆ. ತರಾತುರಿಯಲ್ಲಿ ಅಗಲೀಕರಣಗೊಂಡು ಡಾಮರೀಕರಣಗೊಂಡಿರುವ ಈ ರಸ್ತೆಯ ಡಾಂಬರಿನ ನಡುವೆಯೇ ಅಪಾಯಕಾರಿ ವಿದ್ಯುತ್ ಕಂಬವಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಹೌದು.. ಕುಂದಾಪುರದ ಬಸ್ರೂರು ಮೂರುಕೈನಿಂದ ಸಿದ್ಧಾಪುರಕ್ಕೆ ಹೋಗುವ ರಸ್ತೆಯಲ್ಲಿ ಈ ಬಿಹೆಚ್ ಜಂಕ್ಷನ್ ಸಿಗುತ್ತದೆ. ಈ ಜಂಕ್ಷನ್ ಸಿದ್ದಾಪುರ, ಹುಣ್ಸೆಮಕ್ಕಿ ಮತ್ತು ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ವೃತ್ತವಾಗಿದ್ದು, ಬಸ್ರೂರು ಮೂರುಕೈ-ಸಿದ್ಧಾಪುರ ರಸ್ತೆ ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಹೆಚ್ ರಸ್ತೆ ಅಗಲೀಕರಣಗೊಳ್ಳುತ್ತಿದೆ.

ಇದೀಗ ಬಿ.ಹೆಚ್ ವೃತ್ತದಲ್ಲಿಯೇ ಕಪ್ಪು ಡಾಂಬರಿನ ನಡುವೆ ತಲೆಯೆತ್ತಿ ನಿಂತಿರುವ ಈ ಹಳೆಯ ವಿದ್ಯುತ್ ಕಂಬಕ್ಕೆ ಯಾವುದೇ ಸಂದರ್ಭ ವಾಹನಗಳು ಡಿಕ್ಕಿ ಹೊಡೆಯುವ ಅಪಾಯಗಳಿದ್ದು, ತಕ್ಷಣ ಸಂಬಂದಪಟ್ಟವರು ಎಚ್ಚೆತ್ತುಕೊಂಡು ವಿದ್ಯುತ್ ಕಂಬ ಬದಲಾಯಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
