BlogCrime newsHealthHighlightsHuman storiesLifestyleLocal newsObituaryOthersState newsTop StoriesTrending

ಕುಂದಾಪುರ: ಮಾಜೀ ಶಾಸಕ, ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ : ಬಸ್ರೂರು ಶಾರದಾ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

Aware others:

ಕುಂದಾಪುರ: ಮಾಜೀ ಶಾಸಕ, ಧಾರ್ಮಿಕ ಮುಖಂಡ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಬಸ್ರೂರು ಅಪ್ಪಣ್ಣ ಹೆಗ್ಡೆ (91) ಶನಿವಾರ ಮುಂಜಾನೆ 6.30ರ ಸುಮಾರಿಗೆ ಉಡುಪಿಯ ಖಾಸಗೀ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1935ರ ಡಿ.24ರದು ಬಸ್ರೂರಿನಲ್ಲಿ ಜನಿಸಿದ ಅಪ್ಪಣ್ಣ ಹೆಗ್ಡೆ ಅವರು 1960ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ಕಾಲಿರಿಸಿದ್ದ. 1988-94ರ ಅವಧಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಪ್ಪಣ್ಣ ಹೆಗ್ಡೆ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರಲ್ಲದೇ ಸುದೀರ್ಘ ಕಾಲ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ತಾಲೂಕಿನಲ್ಲಿ ಎಲ್ಲಿಯೇ ಸಮಸ್ಯೆಗಳಿರಲಿ, ತಮ್ಮ ಬುದ್ಧಿವಂತಿಕೆಯಿಂದ ಎರಡೂ ತಂಡಗಳನ್ನೂ ಕರೆಸಿ ಪಂಚಾಯಿತ ಕಟ್ಟೆ ಸೇರಿಸಿ ನಡೆಸುತ್ತಿದ್ದ ಪಂಚಾಯಿತಿಕೆ “ಬಸ್ರೂರು ಪಂಚಾತ್ಕಿ” ಎಂದೇ ಹೆಸರುವಾಸಿಯಾಗಿತ್ತು. ಶಿಕ್ಷಣ ಕ್ರಾಂತಿಯನ್ನೂ ಮಾಡಿದ್ದ ಅಪ್ಪಣ್ಣ ಹೆಗ್ಡೆ, ಸಾಮಾಜಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ತಾಲೂಕು ಕೋ ಅಪರೇಟಿವ್ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ, ಬಸ್ರೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2024ರ ಡಿಸೆಂಬರ್ 24ರಂದು ಬಸ್ರೂರು ಅಪ್ಪಣ್ಣ ಹೆಗ್ಡೆಯವರು “ಅಪ್ಪಣ್ಣ ಹೆಗ್ಡೆ- 90”ರ ಮೂಲಕ ಸಂಭ್ರಮಾಚರಣೆ ಮಾಡಿಕೊಂಡಿದ್ದು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದರು. ಕರಾವಳಿಯ ಹೆಗ್ಗಡೆ ಎಂದೇ ಖ್ಯಾತರಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ, ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ವೀರೇಂದ್ರ ಹೆಗ್ಗಡೆಯವರ ಅತ್ಯಾಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಅಪ್ಪಣ್ಣ ಹೆಗ್ಡೆಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಸ್ರೂರು ಶಾರದಾ ಕಾಲೇಜಿನ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, 10.30ರಿಂದ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!