ತೆಕ್ಕಟ್ಟೆ: ಡ್ರಿಂಕ್ ಎಂಡ್ ಡ್ರೈವ್ – ಫಾರ್ಚುನರ್ ಕಾರು ಪಲ್ಟಿ – ಚಾಲಕ ಸೇರಿ ಮೂವರು ಗಂಭೀರ!
ಕುಂದಾಪುರ: ತೀರ್ಥಯಾತ್ರೆಯ ನೆಪದಲ್ಲಿ ಪ್ರವಾಸ ಹೋಗಿದ್ದ ಗೆಳೆಯರ ತಂಡ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಡ್ರಿಂಕ್ ಎಂಡ್ ಡ್ರೈವ್ ಪರಿಣಾಮ ಅಪಘಾತಕ್ಕೀಡಾಗಿ ನುಜ್ಜುಗುಜ್ಜಾಗಿ ಕಾರಿನಲ್ಲಿದ್ದ ಆರು ಜನರ ಪೈಕಿ ಮೂವರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆ ಸಮೀಪದ ಕನ್ನುಕೆರೆ ನವಶಕ್ತಿ ಕಲ್ಯಾಣ ಮಂಟಪದ ಎದುರು ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ನಡೆದಿದೆ.


ಉಡುಪಿ ಕಡೆಯಿಂದ ಮಹಾರಾಷ್ಟ್ರ ಕಡೆಗೆ ಫಾರ್ಚುನರ್ ಕಾರು ಪ್ರಯಾಣಿಸುತ್ತಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಪಲ್ಟಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದೆ.



ಗಾಯಗೊಂಡವರು ಮಹಾರಾಷ್ಟ್ರದ ಪುಣೆಯ ಲಾ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಒಟ್ಟು 12 ಮಂದಿ ವಿದ್ಯಾರ್ಥಿಗಳು ಜ.31ರಂದು ಎರಡು ಕಾರುಗಳಲ್ಲಿ ದೇಶ ಸುತ್ತುವ ಪ್ರವಾಸಕ್ಕೆ ಹೊರಟಿದ್ದರು. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪುಣೆಗೆ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.


ಘಟನೆ ನಡೆದ ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.


ಅಪಘಾತಕ್ಕೆ ಚಾಲಕನ ಅತೀವೇಗ ಮತ್ತು ಅಜಾಗರೂಕತೆ ಕಾರಣವಾಗಿದ್ದು, ವಿದ್ಯಾರ್ಥಿಗಳು ಮದ್ಯಪಾನ ಅಥವಾ ಡ್ರಗ್ಸ್ ನಶೆಯಲ್ಲಿ ಇದ್ದಿರುವುದು ಅವರ ವರ್ತನೆಯಿಂದ ಸಾಬೀತಾಗಿದೆ. ಅಲ್ಲದೆ ಅಪಘಾತಕ್ಕಿಡಾದ ಕಾರಿನಲ್ಲಿ ಬಿಯರ್ ಹಾಗೂ ಇತರ ಮದ್ಯದ ಬಾಟಲಿಗಳು ಪತ್ತೆಯಾಗಿವೆ.


ಈ ಬಗ್ಗೆ ಆಸ್ಪತ್ರೆಯಲ್ಲಿ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳು ಗೊಂದಲದ ಹೇಳಿಕೆ ನೀಡಿದ್ದು, ಮೊದಲು ತಿರುಪತಿಯಿಂದ ಬರುತ್ತಿರುವುದಾಗಿ ತಿಳಿಸಿದ್ದು, ಮತ್ತೆ ಕೇರಳದಿಂದ ಬರುತ್ತಿರುವುದಾಗಿ ತಿಳಿಸಿದ್ದಾರೆ.


ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
