ಕಲುಷಿತ ನೀರಿನ ಬಿಲ್ ಕಟ್ಟದ್ದಕ್ಕೆ ಜನತಾ ಕಾಲೋನಿ ನಿವಾಸಿಗಳಿಗೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮ ಪಂಚಾಯತ್! ದಲಿತ ಸಂಘಟನೆಗಳ ಆಕ್ರೋಶ
ಕುಂದಾಪುರ: ಜನತಾಕಾಲೋನಿಯೊಂದರಲ್ಲಿ ಕುಡಿಯುವ ನೀರಿನ ಬಿಲ್ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಯಾವುದೇ ಸರ್ಕಾರೀ ಸೌಲಭ್ಯಗಳನ್ನಾಗಲೀ ತಡೆಹಿಡಿಯುವುದಲ್ಲದೇ ಮೂಲ ಭೂತ ಸೌಲಭ್ಯವಾದ ಕುಡಿಯುವ ನೀರಿನ ಹಕ್ಕನ್ನು ಶಾಶ್ವತ ತಡೆಹಿಡಿಯುವುದಾಗಿ ಬೆದರಿಕೆ ನೋಟೀಸು ನೀಡಿದ್ದಲ್ಲದೇ ನೀರು ಸರಬರಾಜು ಸ್ಥಗಿತಗೊಳಿಸಿದ ಅಮಾನವೀಯ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ. ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಗುಡ್ಡೆ ಜನತಾ ಕಾಲೋನಿ ನಿವಾಸಿಗಳೇ ಸಾಮೂಹಿಕ ಬಹಿಷ್ಕಾರದ ಬೆದರಿಕೆಗೆ ಒಳಗಾದವರು.

ಕಾಳಾವರ ಗ್ರಾಮ ಪಂಚಾಯತ್ ನೀಡಿದ ನೋಟಿಸಿನಲ್ಲೇನಿದೆ? … ಈ ಮೂಲಕ ತಮಗೆ ತಿಳಿಯಪಡಿಸುದೇನೆಂದರೆ ನೀವು ನೀರಿನ ತೆರಿಗೆ ಬಾಬ್ತು 1835 ರೂಪಾಯಿ ಪಂಚಾಯತ್ ಗೆ ಬಾಕಿ ಉಳಿಸಿಕೊಂಡಿದ್ದು ಈ ನೋಟೀಸ್ ತಲುಪಿದ 7 ದಿನದಲ್ಲಿ ತಮ್ಮ ಬಾಕಿ ಮೊತ್ತವನ್ನು ಪಂಚಾಯತ್ ಗೆ ಬಂದು ಪಾವತಿಸತಕ್ಕದ್ದು. ತಪ್ಪಿದಲ್ಲಿ ನಿಮ್ಮ ನೀರಿನ ಸಂಪರ್ಕವನ್ನು ಶಾಶ್ವತವಾಗಿ ಕಡಿತಗೊಳಿಸಲಾಗುವುದು ಹಾಗೂ ಪಂಚಾಯತ್ ನಿಂದ ನಿಮಗೆ ಯಾವುದೇ ಸೌಲಭ್ಯವನ್ನು ತಡೆಹಿಡಿಯಲಾಗುವುದು ಹಾಗೂ ಯಾವುದೇ ದೃಢೀಕರಣಗಳನ್ನು ನೀಡುವುದಿಲ್ಲ. ಈ ನೋಟೀಸ್ ನೀವು ಪಡೆಯದಿದ್ದಲ್ಲಿ ನಿಮ್ಮ ಮನೆಯ ಗೋಡೆಗೆ ಅಂಟಿಸಲಾಗುವುದು. ಅದರ ಮಾಹಿತಿಯನ್ನು ಗ್ರಾಮ ಪಂಚಾಯತ್ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಲಾಗುವುದೆಂದು ಈ ಮೂಲಕ ತಮಗೆ ಮಾಹಿತಿ ನೀಡಿದೆ. ಎಂದು ಪಾರ್ವತಿ ಎಂಬುವರಿಗೆ ನೀಡಲಾದ ನೋಟೀಸಿನಲ್ಲಿ ಬರೆಯಲಾಗಿದೆ.

ನೋಟೀಸು ಪಡೆದ ಜನತಾ ಕಾಲೋನಿ ನಿವಾಸಿಗಳು ಕಂಗಾಲಾಗಿದ್ದು, ನಮ್ಮ ಪ್ರಗತಿ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಕಾರ್ಯದರ್ಶಿ ಮೋಹನಚಂದ್ರ ಕಾಳಾವರ್ಕರ್ ಅವರನ್ನು ಸಂಪರ್ಕಿಸಿದ್ದು , ತಕ್ಷಣ ಗ್ರಾಮ ಪಂಚಾಯತ್ವ ಕಚೇರಿಯಲ್ಲಿ ಸಭೆ ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಡಾಗುಡ್ಡಿ ನಿವಾಸಿಗಳಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಆಕ್ರೋಶ ಕೇಳಿಬಂತು. ಸುಮಾರು 15 ರಿಂದ 20 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಪೂರೈಸಲಾಗುತ್ತಿದ್ದರೂ, ಶುದ್ಧ ನೀರು ಒದಗಿಸಲಿಲ್ಲ. ಇಂದಿಗೂ ಕಲುಷಿತ ನೀರನ್ನು ಒದಗಿಸಲಾಗುತ್ತಿದ್ದು, ಶುದ್ಧ ಕುಡಿಯುವ ನೀರು ಒದಗಿಸಿದ ಮೇಲೆ ಬಿಲ್ ಪಾವತಿಸುವುದಾಗಿ ತಿಳಿಸಲಾಯಿತು. ಇದಕ್ಕೊಪ್ಪಿದ ಗ್ರಾಮ ಪಂಚಾಯತ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆದಮೇಲೆ ಬಿಲ್ ಪಾವತಿ ಮಾಡುವುದಕ್ಕೆ ಒಪ್ಪಿಕೊಂಡಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ, ಪಂಚಾಯತ್ ಉಪಾಧ್ಯಕ್ಷರು, ಸದಸ್ಯರಾದ ರಾಮಚಂದ್ರ ನಾವುಡ, ರಮೇಶ್ ಶೆಟ್ಟಿ ವಕ್ವಾಡಿ, ದಲಿತ ಸಮುದಾಯದ ಬಿ ಮೋಹನ್ ಚಂದ್ರ ಕಾಳಾವರ್ಕರ್, ಎಂ.ಪಿ. ಸಂಜೀವ ಮಾಸ್ಟರ್, ಮಹೇಶ ಕೆಳಬೆಟ್ಟು ಹಾಗೂ ಬಡಾಗುಡ್ಡಿ ಜನತಾ ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.

