ಉಡುಪಿ ಜಿಲ್ಲೆಯ ಕರಾವಳಿ ಅಭಿವೃದ್ಧಿಗೆ ಅಧಿವೇಶನದಲ್ಲಿ ಒತ್ತಡ ತರುವಂತೆ ಕುಂದಾಪುರ ಶಾಸಕರಿಗೆ ನಾಗೇಂದ್ರ ಪುತ್ರನ್ ಮನವಿ
ಕೋಟ: ಕರ್ನಾಟಕ ರಾಜ್ಯ ಸರ್ಕಾರದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಕುಂದಾಪುರ ಕ್ಷೇತ್ರದ ಜ್ವಲಂತ ಸಮಸ್ಯೆ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡುವುದರ ಜೊತೆಗೆ ಕರಾವಳಿ ಅಭಿವೃದ್ಧಿಯ ಬಗ್ಗೆ ಕುಂದಾಪುರ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಐದು ಶಾಸಕರ ಪೈಕಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿಯವರು ಸಾರ್ವಜನಿಕರ ಬಗ್ಗೆ ಕನಿಕರ ಹಾಗೂ ಸ್ವಲ್ಪಮಟ್ಟಿನ ಅಭಿವೃದ್ಧಿ ಚಿಂತಕ ಎನ್ನುವ ವಿಶ್ವಾಸ ಇದೆ ಎಂಬ ಕಾರಣಕ್ಕೆ ಈ ಒತ್ತಾಯ ಮಾಡಲಾಗಿದೆ ಎಂದಿರುವ ನಾಗೇಂದ್ರ ಪುತ್ರನ್, ಹಂಗಾರಕಟ್ಟೆ ಬಂದರನ್ನು ಸರ್ವ ಋತು ಬಂದರು ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲು ಮನವಿ ಮಾಡಿದ್ದಾರೆ.
ಕರಾವಳಿ ಪ್ರದೇಶಕ್ಕೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚು ಪ್ರವಾಸಿಗರು ಬರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯನ್ನು ಮಾಹಿತಿ ತಂತ್ರಜ್ಞಾನದ (ಐಟಿ) ಹಬ್ ನಿರ್ಮಿಸಬೇಕು. ಆ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡುವಂತೆ ಸರ್ಕಾರದಮನವೊಲಿಸುವ ಕೆಲಸ ಮಾಡಬೇಕು ಎಂದಿದ್ದಾರೆ.
ಅರ್ಧ ಶತ ವರ್ಷ ಕಳೆದರೂ ಇದುವರೆಗೂ ವಾರಾಹಿ ಯೋಜನೆ ಪೂರ್ಣಗೊಂಡಿಲ್ಲ. ಕೃಷಿ ನೀರಾವರಿ ಜೊತೆಗೆ ಕುಡಿಯುವ ನೀರಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರದತ್ತ ಗಮನಹರಿಸಿ ಸಮುದ್ರಕ್ಕೆ ಕಲ್ಲು ಹಾಕುವುದನ್ನು ತಡೆಯಬೇಕು ಎಂದಿರುವ ನಾಗೇಂದ್ರ ಪುತ್ರನ್, ಉಡುಪಿ ಜಿಲ್ಲೆಗೆ ಒಂದಾದರೂ ವೈದ್ಯಕೀಯ ಕಾಲೇಜು ತರಿಸಲು ಅಧಿವೇಶನದಲ್ಲಿ ಧ್ವನಿಯೆತ್ತಬೇಕು ಎಂದು ಶಾಸಕರನ್ನು ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
