ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ! ಯುವ ಕಾಂಗ್ರೆಸ್ ನಿಂದ ಪ್ರತಿಭಟನೆಯ ಎಚ್ಚರಿಕೆ!

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ವ್ಯಾಪ್ತಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಹಾಗೂ ವಿವಿಧ ಇಲಾಖೆಗಳ ಮೂಲಕ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದರ ವಿರುದ್ಧ ಉಡುಪಿ ಜಿಲ್ಲಾ ಕೋಟ ಬ್ಲಾಕ್ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ಹೊರಹಾಕಿದೆ.

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಹೆಸರಿನಲ್ಲಿ ಕಳೆದ 2 ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಖಂಡನೀಯ. ಯಾವುದೇ ಕೆಲಸ ಕಾರ್ಯ ನಡೆಯದಿರುವ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ಇಲಾಖೆಯನ್ನು ಬಳಸಿಕೊಂಡು, ಪ್ರತಿದಿನ ನೂರಾರು ಲೋಡ್ ಮರಳು ಸಾಗಾಟ ನಡೆಸಲಾಗುತ್ತಿದ್ದು, ಅಕ್ರಮ ಟ್ರೀಪ್ ಶೀಟ್‌ಗಳನ್ನು ನೀಡಲಾಗುತ್ತಿದೆ ಎಂದು ಕೋಟ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಆರೋಪಿಸಿದ್ದಾರೆ.

ವಾಸ್ತವ.ಕಾಮ್ ಜೊತೆಗೆ ಮಾತನಾಡಿರುವ ಅವರು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್.) ನಲ್ಲಿ ಸಧ್ಯ ಕಾಮಗಾರಿಗಳೇ ನಡೆಯುತ್ತಿಲ್ಲ. ಹಾಗೂ ನಡೆಯುತ್ತಿರುವ ಕಾಮಗಾರಿಗಳಿಗೆ ಎಂ ಸ್ಯಾಂಡ್ ಬಳಸಲಾಗುತ್ತಿದೆ. ಹಾಗಾದರೆ ಧಕ್ಕೆಗಳಿಂದ ಸಾಗಿಸಲಾಗುತ್ತಿರುವ ಲೋಡುಗಟ್ಟಲೆ ಮರಳು ಯಾರ ಹೊಟ್ಟೆತುಂಬಿಸುತ್ತಿದೆ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಜಿಲ್ಲಾ ಇಲಾಖೆಗೆ, ಭೂಮಾಪನಾ ಅಧಿಕಾರಿಗೂ ದೂರು ಸಲ್ಲಿಸಿದ್ದು, ಸರ್ಕಾರದ ಘೋಷಣೆಯಂತೆ ಬಡವರಿಗೆ ಸಬ್ಸಿಡಿ ದರದಲ್ಲಿ ಲಭ್ಯವಾಗಬೇಕಾದ ಮೂರು ಯೂನಿಟ್ ಮರಳನ್ನು ಅಕ್ರಮವಾಗಿ ಹದಿನೈದು ಸಾವಿರ ರೂಪಾಯಿಗಳಿಗೆ ಮಾರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರಿಗಳ ಅಲಕ್ಷ್ಯದಿಂದಾಗಿ ನಾಗರಮಠ ಹಾಗೂ ಕಾವಡಿ ಪ್ರದೇಶದಲ್ಲಿ ಸಾರ್ವಜನಿಕರ, ರೈತರ ವಿರೋಧವಿದ್ದರೂ ಮರಳು ಪರವಾನಿಗೆ ನೀಡಲು ಶಾಸನಾತ್ಮಕವಾಗಿ ವಿಫಲ ಯತ್ನಗಳು ನಡೆಯುತ್ತಿವೆ. ತಕ್ಷಣ ಅಕ್ರಮ ಮರಳುಗಾರಿಕೆ ನಿರ್ಬಂಧಿಸಿ ಕ್ರಮಕೈಗೊಳ್ಳದಿದ್ದಲ್ಲಿ ಯುವ ಕಾಂಗ್ರೆಸ್ ಕಾನೂನು ಹೋರಾಟ ಮತ್ತು ಸಾರ್ವಜನಿಕ ಪ್ರತಿಭಟನೆ ನಡೆಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಆರ್.ಐ.ಡಿ.ಎಲ್ ಅಧಿಕಾರಿ ವಿಜಯ್ ಅವರು ಸರ್ಕಾರೀ ಕಾಮಗಾರಿಗಳು ಆರಂಭಗೊಳ್ಳುವ ಹಂತದಲ್ಲಿವೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಐದು ಧಕ್ಕೆಗಳು ಇದ್ದು, ಶೇ. 25:75ರ ಅನುಪಾತದಲ್ಲಿ ಮರಳು ಸಂಗ್ರಹಿಸಲಾಗುತ್ತಿದೆ. ಹೊಸದಾಗಿ ಯಾವುದೇ ಮರಳು ಧಕ್ಕೆ ಆರಂಭಕ್ಕೆ ಅನುಮೋದನೆ ನೀಡುವುದಿಲ್ಲ. ಅಕ್ರಮ ಮರಳು ಸಾಗಾಟ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.


