ಕಾಳಾವರ: ಕಾಳಿಂಗ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಟಿ ಮಹೋತ್ಸವ
ಕುಂದಾಪುರ: ನಾಗಾರಾಧನೆಯ ಪುಣ್ಯ ಕ್ಷೇತ್ರಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯದ ನಂತರದ ಸ್ಥಾನ ಪಡೆದಿರುವ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ಇಂದು ಚಂಪಾಷಷ್ಟಿ ಮಹೋತ್ಸವವು ಸಂಭ್ರಮದಿಂದ ನಡೆಯಿತು.


ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಿಂದ ಕಾಳಿಂಗ ಇಲ್ಲಿಗೆ ಹರಿದು ಬಂದು ನೆಲೆ ನಿಂತ ಕ್ಷೇತ್ರವೇ ಕಾಲಾವರ ಕಾಳಿಂಗ ಸುಬ್ರಹ್ಮಣ್ಯನ ಸನ್ನಿಧಿ ಎಂದು ನಂಬಲಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸ ಹೊಂದಿದೆ.





ಕಾಳಾವರ ಕ್ಷೇತ್ರದಲ್ಲಿ ಸ್ವಯಂಭೂ ನಾಗನ ಮೂಲ ಬನವಿದೆ. ಕಾಳಿಂಗ ಸುಬ್ರಹ್ಮಣ್ಯ ದೇವರೊಂದಿಗೆ ಶ್ರೀ ಮಹಾಲಿಂಗೇಶ್ವರನ ಸಾನ್ನಿಧ್ಯವಿದೆ. ಚಂಪಾಷಷ್ಠಿ ದಿನವಾದ ಇಂದು ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನದ ಪುಷ್ಕರಿಣಿಯಲ್ಲಿ ಶುಭ್ರಗೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಕಾಳಿಂಗ ಸುಬ್ರಹ್ಮಣ್ಯನ ದರ್ಶನ ಪಡೆದರು.






ಸಂತಾನ ಪ್ರಾಪ್ತಿ, ನಾಗದೋಷ ನಿವಾರಣೆ, ಚರ್ಮ ರೋಗ, ಭೂ ಸಂಬಂಧಿ ದೋಷ ನಿವಾರಣೆ, ರೋಗ ರೋಜಿನಗಳ ಪರಿಹಾರ ಇತ್ಯಾದಿಗಳಿಗಾಗಿ ಹರಕೆ ಹೊತ್ತ ಸಾವಿರಾರು ಭಕ್ತರು ಹರಕೆ ತೀರಿಸಿ ಕೃತಾರ್ಥರಾದರು. ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಅನ್ನಸಂತರ್ಪಣೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ ಅಸೋಡು ಹೇಳಿದರು.










ಸುಬ್ರಹ್ಮಣ್ಯ ಷಷ್ಠಿ ದಿನ ಬಹುತೇಕ ಭಕ್ತರ ಮನೆಯಲ್ಲಿ ಬೂದು ಗುಂಬಳಕಾಯಿಯ ಪದಾರ್ಥ ಮತ್ತು ವಿವಿಧ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವಿದ್ದು, ತರಕಾರಿ ಮಾರಾಟ ಮಾಡುವುದು ಇಲ್ಲಿನ ವಿಶೇಷ. ಚಂಪಾ ಷಷ್ಠಿ ಮಹೋತ್ಸವದಲ್ಲಿ ಉರುಳು ಸೇವೆ ಮೊದಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ನಾಳೆ ಹಾಲಿಟ್ಟು ಸೇವೆ ಮತ್ತು ಕಟ್ಟುಕಟ್ಟಲೆಯ ನಾಗಮಂಡಲ ಸೇವೆ ಮತ್ತು ತುಲಾಭಾರ ಸೇವೆ ನಡೆಯಲಿದೆ.
