ಕೋಟೇಶ್ವರ: ದೊಡ್ಡೋಣಿ ಅಂಗನವಾಡಿಯ ನೂತನ ಕಟ್ಟಡ ಉದ್ಘಾಟನೆ


ಕುಂದಾಪುರ: ಕಳೆದ ನಲವತ್ತೆರಡು ವರ್ಷಗಳಿಂದ ಖಾಸಗೀ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೀಜಾಡಿ ದೊಡ್ದೋಣಿ ಅಂಗನವಾಡಿ ಕೇಂದ್ರವನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕ ಕೊಡ್ಗಿ, ಬಾಲ ವಿಕಾಸ ಸಮಿತಿ ಹಾಗೂ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ದೊಡ್ದೋಣಿ ಬೀಜಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಬೀಜಾಡಿ ಇವರ ಅನುದಾನದ ಮೂಲಕ ಬಹಳ ಸುಸಜ್ಜಿತವಾದ ಅಂಗನವಾಡಿಯ ಕೇಂದ್ರ ನಿರ್ಮಾಣಗೊಂಡಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಇದೇ ಸಂದರ್ಭ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಗುಲಾಬಿ ದೇವಾಡಿಗ ಹಾಗೂ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಅಂಗನವಾಡಿಯ ಶಿಕ್ಷಕಿ ಪ್ರಭಾವತಿಯವರನ್ನು ಅಭಿನಂದಿಸಿದರು. ಬೀಜಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಪ್ರಕಾಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೀಜಾಡಿ ನೀರೇಶ್ವಾಲ್ಯ ಸಂಘದ ಅಧ್ಯಕ್ಷ ಗೋಪಾಲ ದೇವಾಡಿಗ, ಬೀಜಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಜನಿ ಜೂಲಿ, ಅಭಿವೃದ್ಧಿ ಯೋಜನೆ ಅಧಿಕಾರಿ ಉಮೇಶ್ ಟಿ.ಎಲ್., ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಬಿಂದು, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ, ಧಾರ್ಮಿಕ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿನ ಸದಸ್ಯರು, ವಿವಿಧ ಕ್ಷೇತ್ರದ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.
