ಮಲ್ಪೆ: ರಹಸ್ಯ ಮಾಹಿತಿ ರವಾನೆ ಆರೋಪ – ಉತ್ತರಪ್ರದೇಶದ ಇಬ್ಬರ ಬಂಧನ
ಉಡುಪಿ: ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನೋಂದಣಿ ಸಂಖ್ಯೆಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದ ಆರೋಪದ ಮೇಲೆ ಮಲ್ಪೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಚ್ಚಿನ್ ಶಿಪ್ಯಾರ್ಡ್ ನ M/S Shushma Marine Private Limited ಸಂಸ್ಥೆಯ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಂಶಂಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಅನಂತರಾಮ್ ಭಟ್‌ಪುರದ ನಿವಾಸಿ ಲಲ್ಲೆ ಎಂಬುವರ ಪುತ್ರ ರೋಹಿತ್ (29) ಹಾಗೂ ಉತ್ತರ ಪ್ರದೇಶದ ಹಂಜಾಬಾದ್ ಮೈಂದಾನ್ ನಿವಾಸಿ ಸಂತ್ರಿ (37) ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿಸಿದ್ದಾರೆ.
ಕೊಚ್ಚಿನ್ ಶಿಪ್ ಯಾರ್ಡ್ ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಡಿಯಲ್ಲಿರುವ ಒಂದು ಸಂಸ್ಥೆಯಾಗಿದ್ದು, M/S Shushma Marine Private Limited ಎಂಬ ಸಂಸ್ಥೆಗೆ ಉಪಗುತ್ತಿಗೆ ಪಡೆದುಕೊಂಡಿತ್ತು.

ರೋಹಿತ್ ಹಾಗೂ ಸಂತ್ರಿ ಇಬ್ಬರೂ ಈ ಹಿಂದೆ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳನ್ನು ನಿರ್ಮಾಣ ಮಾಡುತ್ತಿರುವ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಬಳಿಕ ರೋಹಿತ್ ಮಲ್ಪೆಯ ಶಿಪ್ ಯಾರ್ಡ್ ನಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಆದರೆ ರೋಹಿತ್‌ನು ಕೇರಳದಲ್ಲಿ ಕೆಲಸ ಮಾಡುವಾಗ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬ್ರಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೇ ಮಲ್ಪೆಗೆ ಬಂದ ನಂತರವೂ ಕೊಚ್ಚಿಯಲ್ಲಿರುವ ಆತನ ಸ್ನೇಹಿತ ಸಂತ್ರಿಯಿಂದ ಮಾಹಿತಿ ಪಡೆದು, ಪುನಃ ವಾಟ್ಸಪ್ ಮೂಲಕ ಅನಧಿಕೃತ ವ್ಯಕ್ತಿಗೆ ಶೇರ್ ಮಾಡಿ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಅಪಾಯವನ್ನುಂಟು ಮಾಡುವ ಮತ್ತು ಆಂತರಿಕ ಭಧ್ರತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ ಎಂದು ಆರೋಪಿಸಿ ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನ ಸಿಇಓ ಅವರು ಮಲ್ಪೆ ಠಾಣೆಗೆ ನೀಡಿದ ದೂರಿನಂತೆ ಕಲಂ:152 BNS, ಕಲಂ:3,5 OFFICIAL SECRETS ACT, 1923ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಂವದಾ ಐಪಿಎಸ್ ರವರ ನೇತೃತ್ವದ ಮಲ್ಪೆ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ್ ಡಿ, ಎಎಸ್‌ಐ ಹರೀಶ್, ಪಿಸಿ ರವಿ ಜಾಧವ್ ತಂಡ ಆರೋಪಿಗಳಿಬ್ಬರನ್ನೂ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಡಿಸೆಂಬರ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ.
