ಬೈಂದೂರು: ಅಭಿವೃದ್ಧಿಗೆ ತೊಡಕಾಗುವ ಅರಣ್ಯ ಕಾನೂನು ಪ್ರಕ್ರಿಯೆ ಪರಿಹಾರಕ್ಕೆ ಅರಣ್ಯ ಅದಾಲತ್ – ಶಾಸಕ ಗಂಟಿಹೊಳೆ
ಬೈಂದೂರು: ಬಹುತೇಕ ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಸಾಮಾನ್ಯ ಅರಣ್ಯ ಪ್ರದೇಶ ಸೇರಿದಂತೆ ಮೀಸಲು ಅರಣ್ಯ, ಸಾಮಾಜಿಕ ಅರಣ್ಯ ಹಾಗೂ ಕೆಸಿಡಿಸಿ ವ್ಯಾಪ್ತಿ ದೊಡ್ಡದಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಯಾದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ನಿರಾಕ್ಷೇಪಣೆ ಪಡೆಯಲು ಅವಕಾಶವಿದ್ದರೂ, ಅರಣ್ಯ ಕಾನೂನಿನ ಅರ್ಥೈಸುವಿಕೆ ಹಾಗೂ ಪರಿವೆಷಿ ತಂತ್ರಾಂಶಗಳ ಬಳಕೆ ಬಗ್ಗೆ ಅನುಷ್ಠಾನ ಇಲಾಖೆಗಳಿಗೆ ಮಾಹಿತಿ ಕೊರತೆಯ ಕಾರಣದಿಂದ ಯೋಜನೆಗಳು ನೆನೆಗುದಿಗೆ ಬಿದ್ದು ರದ್ದುಗೊಳ್ಳುವ ಸಂದರ್ಭವಿರುವುದರಿಂದ ಅದನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಅರಣ್ಯ ಅದಾಲತ್ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.

ಬೈಂದೂರು ತಾಲೂಕು ಆಡಳಿತ ಕಚೇರಿ ಪ್ರಜಾ ಸೌಧದಲ್ಲಿ ನಡೆದ ಅರಣ್ಯ, ಕಂದಾಯ ಹಾಗೂ ಇತರೆ ಇಲಾಖೆಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊಲ್ಲೂರು ಗ್ರಾಮದ ಸರ್ವೇ ನಂಬ್ರ 121 ರಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಹೆಸರಿನಲ್ಲಿ ಲಭ್ಯ ಜಮೀನಿನ ಬಗ್ಗೆ ಇಲಾಖೆಗಳ ನಡುವೆಯೇ ಗೊಂದಲಗಳಿರುವ ಕಾರಣ ಅಕ್ರಮ ಸಕ್ರಮ ಹಾಗೂ 94 ಸಿ ಅರ್ಜಿಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಬೇಕು, ಸರ್ವೇ ನಂಬ್ರ 56 ರಲ್ಲಿನ ಸಮಸ್ಯೆಗಳಿಗೆ ಮತ್ತೊಮ್ಮೆ ಸರ್ವೇ ನಡೆಸಿ ವರದಿ ನೀಡಬೇಕು ಎಂದರು.

ಜಡ್ಕಲ್ ಹಾಗೂ ಮುದೂರು ಗ್ರಾಮಗಳಲ್ಲಿರುವ ಪ್ಲಾಟಿಂಗ್ ಸಮಸ್ಯೆ ನಿವಾರಣೆಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಗಳ ಸಮಕ್ಷಮ ಒಂದು ಸುತ್ತಿನ ಸಭೆ ನಡೆಸಲಾಗಿದ್ದು ಅದರಂತೆ ಸದರಿ ಸಮಸ್ಯೆಯನ್ನು ಬಗೆ ಹರಿಸಲು ವಿವಿಧ ಕಾರ್ಯತಂತ್ರಗಳನ್ನು ರೂಪಿಸಿ ಉಪ ವಿಭಾಗಾಧಿಕಾರಿ ಭೂ ನ್ಯಾಯ ಮಂಡಳಿಯ ಮುಂದೆ ಹಾಗೂ ಸರ್ವೇ ಮುಖಾಂತರ ಪರಿಹಾರ ಕಂಡುಕೊಳ್ಳಬೇಕು ಎಂದರು. ರಾಷ್ಟೀಯ ಹೆದ್ದಾರಿ 766ಸಿ ಭೂ ಸ್ವಾಧೀನಕ್ಕೆ ಸಂಬಂಧಿಸಿ 419 ಜನರಿಗೆ ಭೂ ಪರಿಹಾರ ಪ್ರಕ್ರಿಯೆ ನಡೆಯುತ್ತಿದ್ದು, ಬಾಕಿ ಇರುವ 88 ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥ ಪಡಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಬದಿ ಮರಗಳ ತೆರವಿಗೆ ತುರ್ತು ಕಾರ್ಯ ಪ್ರವೃತ್ತರಾಗಬೇಕು ಎಂದು ಅರಣ್ಯ ಹಾಗೂ ರಾಷ್ಟೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಕುಂದಾಪುರ ಉಪ ವಿಭಾಗಾಧಿಕಾರಿ ಎಸ್.ಆರ್.ರಶ್ಮಿ, ಭೂದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ಹಾಗೂ ಕೆ.ಸಿ.ಡಿ. ಸಿ ವಿಭಾಗೀಯ ವ್ಯವಸ್ಥಾಪಕರು, ಅರಣ್ಯ ಇಲಾಖೆಯ ಎ.ಸಿ.ಎಫ್ ಗಳು, ವಲಯ ಅರಣ್ಯಾಧಿಕಾರಿಗಳು, ತಾಲೂಕು ತಹಸೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿಗಳು, ಹಾಗೂ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
