ಬೈಂದೂರು: ಮತ್ತೊಮ್ಮೆ ಬೈಂದೂರು ಉತ್ಸವದ ಹಬ್ಬ – ಶಾಸಕ ಗುರುರಾಜ್ ಶೆಟ್ಟಿ ನೇತೃತ್ವದಲ್ಲಿ ಸಭೆ
ಕುಂದಾಪುರ: ಉಡುಪಿ ಜಿಲ್ಲೆಯ ತುತ್ತತುದಿಯಲ್ಲಿ ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿರುವ ಬೈಂದೂರು ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆ ಮೂಲಕ ಅಭಿವೃದ್ಧಿ ಪರಿಕಲ್ಪನೆಯ ಉದ್ದೇಶದಿಂದ ಮತ್ತು ಜಾಗತಿಕ ಮಟ್ಟದಲ್ಲಿ ಬೈಂದೂರು ಕ್ಚೇತ್ರದವರನ್ನು ಒಗ್ಗೂಡಿಸುವ ಚಿಂತನೆಯಲ್ಲಿ ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ ಹಾಗೂ ತಾಲೂಕು ಆಡಳಿತ ಬೈಂದೂರು ಇದರ ಸಹಭಾಗಿತ್ವದಲ್ಲಿ ಎರಡನೇ ವರ್ಷದ ಸಾಂಸ್ಕçತಿಕ ಸಂಭ್ರಮದ ಬೈಂದೂರು ಉತ್ಸವ ಜನವರಿ ಮೊದಲ ವಾರದಲ್ಲಿ ನಡೆಯಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಉಪ್ಪುಂದ ಕಾರ್ಯಕರ್ತ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕ್ಷೇತ್ರದ ಪ್ರವಾಸೋದ್ಯಮದ ಅವಕಾಶಗಳನ್ನು ಪರಿಚಯಿಸುವುದು ತನ್ಮೂಲಕ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಬೈಂದೂರಿಗೆ ಕರೆತರುವುದು ಹಾಗೂ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರ, ಶಿಕ್ಷಣ ಕ್ರಾಂತಿ, ನೆಲಮೂಲ ಆಚರಣೆ, ಸರಳ ಸರ್ಕಾರಿ ವ್ಯವಸ್ಥೆ ಮೂಲಭೂತ ಅಗತ್ಯತೆ ಇದರ ಆಶಯವಾಗಿದೆ ಎಂದರು.

ಉದ್ಯೋಗ, ಆರೋಗ್ಯ, ಕೃಷಿ, ಆಹಾರ, ವಿಜ್ಞಾನ, ಕರಕುಶಲ, ಶಿಕ್ಷಣ ಮೇಳಗಳು, ಸಂಜೀವಿನಿ ಸಂಘದ ಗ್ರಾಮೀಣ ಸಂತೆ, ಕಂಬಳೋತ್ಸವ, ಸೋಮೇಶ್ವರದಲ್ಲಿ ಬೀಚ್ ಉತ್ಸವ, ಕರಾವಳಿಯ ಖಾದ್ಯಗಳು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಅಲ್ಲದೇ ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಗೋಷ್ಠಿಗಳು, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಜಾದೂಲೋಕ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ಟ್ಯಾಬ್ಲೊ ಮೇಳ, ದೇಹದಾರ್ಡ್ಯ ಪ್ರದರ್ಶನ, ನಾದನೂಪುರ, ಕಾರ್ಟೂನ್ ಹಬ್ಬ, ಮನೋರಂಜನಾ ಪಾರ್ಕ್, ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾಡೈವ್ ಮುಂತಾದವುಗಳನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದರು.

ಇದೇ ಸಂದರ್ಭ ಬೈಂದೂರು ವಲಯ ಕಂಬಳ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಸಿಹಿತ್ಲು ಮಂಜು ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ, ನಿರ್ದೇಶಕ ಯು. ಪಾಂಡುರಂಗ ಪಡಿಯಾರ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್. ಕೆ., ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ, ನಿವೃತ್ತ ಯೋಧ ಬಿ. ಚಂದ್ರಶೇಖರ ನಾವಡ, ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಗೀತಾ, ಸುರೇಶ ಬಟವಾಡಿ, ಪುಷ್ಪರಾಜ ಶೆಟ್ಟಿ, ಶ್ಯಾಮಲಾ ಕುಂದರ್, ಜಗನ್ನಾಥ ಉಪ್ಪುಂದ, ಸವಿತಾ ದಿನೇಶ್, ಸಂದೇಶ ಭಟ್ ಮೊದಲಾದವರು ಇದ್ದರು. ಉತ್ಸವದ ಸಂಚಾಲಕ ಶ್ರೀಗಣೇಶ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು.
