ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಗೆ ಕೊಲೆ ಬೆದರಿಕೆ – ರಾಘವೇಂದ್ರ ಕಾಂಚನ್ ವಿರುದ್ಧ ಎಫ್ಐಆರ್

ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕೋಟದ ನಾಗೇಂದ್ರ ಪುತ್ರನ್ ಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೊಡಿ ಕೊಲೆ ಪ್ರಕರಣದ ಆರೋಪಿ ರಾಘವೇಂದ್ರ ಕಾಂಚನ್ ಹಾಗೂ ಆತನ ಸಹಚರ ಜಯಪಾಲ ಪುತ್ರನ್ ಎಂಬುವರ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಂದ್ ಪುತ್ರನ್ ಅವರು ಈ ಹಿಂದೆ ಕೋಟದಲ್ಲಿ ನಡೆದಿದ್ದ ಜೋಡಿ ಕೊಲೆಯಾದ ಭರತ್ ಮತ್ತು ಯತೀಶ್ ರವರ ತಾಯಂದಿರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ನೆರವಾಗಿದ್ದು, ಅದೇ ವಿಚಾರಗಳನ್ನು ಇಟ್ಟುಕೊಂಡು ಕೊಲೆ ಆರೋಪಿ ರಾಘವೇಂದ್ರ ಕಾಂಚನ್ ನ್ಯಾಯಾಲಯದ ಬಂಧನದಿಂದ ಹೊರಬಂದ ನಂತರ ನಾಗೇಂದ್ರ ಪುತ್ರನ್ ವಿರುದ್ಧ ದ್ವೇಷ ಸಾಧನೆ ಪ್ರಾರಂಬಿಸಿ ಅನೇಕರಲ್ಲಿ ಬೋಳಿಮಗನನ್ನು ತೆಗೆದು ಬಿಡುತ್ತೇನೆ, ಅವನನ್ನು ವಾಶ್ ಔಟ್ ಮಾಡಿ ಬಿಡುತ್ತೆನೆಂದು ಹೇಳಿಕೊಂಡು ತಿರುಗಾಡುತ್ತಿದ್ದನೆನ್ನಲಾಗಿದೆ.

ಬಳಿಕ ಮಲ್ಪೆ ಮಹಾಲಕ್ಷ್ಮೀ ಬ್ಯಾಂಕ್ ಹಗರಣದ ವಿಚಾರವಾಗಿ ಬಹಿರಂಗವಾಗಿ ನ್ಯಾಯಕ್ಕಾಗಿ ನಾಗೇಂದ್ರ ಪುತ್ರನ್ ಹೋರಾಡುತ್ತಿದ್ದುದಕ್ಕೆ ರಾಘವೇಂದ್ರ ಕಾಂಚನ್ ಹಾಗೂ ಜಯಪಾಲ ಪುತ್ರನ್ ಇನ್ನಷ್ಟು ಟಾರ್ಗೆಟು ಮಾಡಿ ಮಿತ್ರರಲ್ಲಿ ಮತ್ತು ಸಂಬಂದಿಕರಲ್ಲಿ ಅನೇಕ ಬಾರಿ ಕೊಲೆ ಬೆದರಿಕೆ ಹಾಕಿದ್ದರೆನ್ನಲಾಗಿದೆ.
ನಾಗೇಂದ್ರ ಪುತ್ರನ್ ಅವರ ಮಿತ್ರನಾದ ಕಿಶೋರ್ ಶೆಟ್ಟಿ ಎಂಬುವವರಿಗೆ ಜುಲೈ 17ರಂದು ಕರೆ ಮಾಡಿ ನಿನ್ನ ಸ್ನೇಹಿತಗೆ ಬುದ್ದಿ ಹೇಳು. ಒಳ್ಳೆಯ ರೀತಿಯಲ್ಲಿ ಸುಮ್ಮನೆ ಇದ್ದರೇ ಸರಿ. ಇಲ್ಲದಿದ್ದರೆ ಒಂದು ವಾರದ ಒಳಗೆ ಜೀವದಿಂದ ತೆಗೆಯುವುದು ಗ್ಯಾರಂಟಿ ಎಂದು ಬೆದರಿಕೆ ಹಾಕಿದ್ದಾರೆ. ನಂತರ ಆರೋಪಿಗಳು ಕಿಶೋರ್ ಶೆಟ್ಟಿಗೆ ಕರೆ ಮಾಡಿ ಬೆಂಗಳೂರಿಗೆ ಓಡಿ ಹೋಗಿದ್ದಾನಲ್ಲ ಬೋಳಿಮಗ ಅಲ್ಲೇ ಮುಗಿಸುತ್ತೇನೆ ಎಂದೆಲ್ಲ ಹೇಳಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮಾನ್ಯ ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆಬೆದರಿಕೆ ಪ್ರಕರಣ ದಾಖಲಾಗಿದೆ.
