ವಿದ್ಯಾರಣ್ಯ: ಸುಜ್ಞಾನದಲ್ಲಿ ಬೆಳಕಿನ ಹಬ್ಬ, ಗೋಪೂಜೆ, ದೀಪಾವಳಿ ಸಂಭ್ರಮ










ಕುಂದಾಪುರ: ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದೊಂದಿಗೆ ಜನಪದೀಯ ಹಬ್ಬಗಳ ಸಂಪ್ರದಾಯ, ಸಂಸ್ಕೃತಿಗಳ ಪರಿಚಯ ಮಾಡುವ ನಿಟ್ಟಿನಲ್ಲಿ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ಹಮ್ಮಿಕೊಂಡ ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಅನುಕರಣೀಯವಾಗಿತ್ತು.




















ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲಾಮಾಧ್ಯಮ ಸಂಸ್ಥೆಯ ನಿರ್ದೇಶಕ ಪರಮೇಶ್ವರ ದಂಪತಿಗಳಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್, ಅ-ಕ್ಷರವೆಂದರೆ ಕ್ಷರವಲ್ಲದ್ದು. ಕ್ಷರ ಎಂದರೆ ನಶಿಸುವುದು. ನಶಿಸದೇ ಇರುವುದು ಅಕ್ಷರ. ಅಕ್ಷರವೆನ್ನುವ ಜ್ಞಾನದ ಬೆಳಕಿನ ಜೊತೆಗೆ ಸಂಸ್ಕೃತಿ, ಸಂಪ್ರದಾಯಗಳೆನ್ನುವ ಅನುಭವಗಳು ಬೆಸೆದಾಗ ಅದ್ಭುತ ಜೀವನ ಲಭ್ಯವಾಗುತ್ತದೆ. ಸುಜ್ಞಾನ ಸಂಸ್ಥೆಯು ಉತ್ತಮ ಶಿಕ್ಷಣದ ಜೊತೆಗೆ ಸದ್ವಿಚಾರಗಳನ್ನು ಬಿತ್ತುತ್ತಿದೆ ಎಂದರು.





















ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, “ವಿದ್ಯೆ ಕಲಿಸಿದ ಗುರು ಹಾಗೂ ಜನ್ಮ ನೀಡಿದವರನ್ನು ಎಂದಿಗೂ ಮರೆಯಬಾರದು. ಕೀಳರಿಮೆಯನ್ನಾಗಲೀ, ಅತೀ ಆತ್ಮವಿಶ್ವಾಸವನ್ನಾಗಲಿ ಬೆಳೆಸಿಕೊಳ್ಳಬಾರದು. ಮಾನವೀಯ ಮೌಲ್ಯಗಳ ಪಾಲನೆಗೆ ಬದ್ಧವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.












ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, “ಮಕ್ಕಳಿಗೆ ಸಹಾಯವಾಗಲೆಂದು ಇಂತಹ ಕಾರ್ಯಕ್ರಮಗಳನ್ನು ಸಂಸ್ಥೆಯು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಹಬ್ಬದ ಆಚರಣೆಗಳ ಮೂಲಕ ಮಕ್ಕಳಿಗೆ ಪರಂಪರೆಯ ಬಗ್ಗೆ ಗೌರವ ಹೆಚ್ಚುತ್ತದೆ ಎಂದರು.






ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಸಿ, ದೀಪಾವಳಿ ಬೆಳಕಿನ ಹಬ್ಬ. ಹಾಸ್ಟೆಲ್ ನಲ್ಲಿರುವ ಮಕ್ಕಳಿಗೆ ಹಬ್ಬ ಆಚರಣೆಗಳ ಅರಿವು ಮೂಡಿಸಲು ಒತ್ತು ನೀಡುತ್ತಿದೆ. ಇದರಿಂದ ಮಕ್ಕಳಿಗೆ ನಮ್ಮ ಸಂಪ್ರದಾಯದ ತಿಳಿಯಲು ಸಾಧ್ಯವಾಗುತ್ತದೆ ಎಂದರು. ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸನಾತನ ಧರ್ಮದ ಪ್ರತಿಯೊಂದು ಹಬ್ಬವೂ ಒಂದೊಂದು ಸಂದೇಶ ನೀಡುತ್ತದೆ. ವಿದ್ಯಾರ್ಥಿಗಳು ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ವಿಷಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಚಿಂತಕರಾದ ಪಡುಕರೆ ಉದಯಶೆಟ್ಟಿ, ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯ ಪ್ರದೀಪ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕೃತ ಶಿಕ್ಷಕಿ ಶ್ರೀಮತಿ ಸುದಕ್ಷಿಣ ನಿರೂಪಿಸಿದರು.

ಬಳಿಕ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಗದ್ದೆಗೆ ಹಿಟ್ಟು ಬಡಿಸುವುದು, ಬಲೀಂದ್ರ ಕರೆಯುವುದು, ತುಳಸಿಕಟ್ಟೆ ಪೂಜೆ, ಗೋಪೂಜೆಗಳನ್ನು ನೆರವೇರಿಸಲಾಯಿತು. ಪ್ರಾಚೀನ ವಸ್ತುಗಳ ಪ್ರದರ್ಶನ, ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.

ಕೊನೆಯಲ್ಲಿ ಅರೆಹೊಳೆ ನಂದಗೋಕುಲ ಕಲಾವಿದರು ಪ್ರಸ್ತುತಪಡಿಸಿದ ʼಬಿಡುವನೆ ಬ್ರಹ್ಮಲಿಂಗʼ ನೃತ್ಯ ಪ್ರದರ್ಶನ ನಡೆಯಿತು. ಹಬ್ಬದಾಚರಣೆಯ ಜೊತೆಗೆ ಹಬ್ಬದೂಟವೂ ನಡೆಯಿತು.

