BlogEconomyEntertainmentFashionGovernmentHighlightsHuman storiesLifestyleLocal newsOthersProtestState newsTop StoriesTrending

ಸಾಲಿಗ್ರಾಮ: ಪಟ್ಟಣ ಪಂಚಾಯತ್ ನಿಂದ ಅವೈಜ್ಞಾನಿಕ ತೀರ್ಮಾನ – ಘನ ತ್ಯಾಜ್ಯ ಘಟಕಕ್ಕೆ ತೀವ್ರ ವಿರೋಧ – ಕಪ್ಪು ಭಾವುಟ ಪ್ರದರ್ಶನದ ಎಚ್ಚರಿಕೆ

Aware others:

ಕುಂದಾಪುರ: ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಪಾರಂಪಳ್ಳಿ ಗ್ರಾಮದ ಸರ್ವೇ ನಂಬ್ರ 104/24, 25 ರಲ್ಲಿ, ಘನ ತ್ಯಾಜ್ಯ ಘಟಕ ಉದ್ಘಾಟನೆಗೆ ಮುಂದಾಗಿದ್ದು ಸುತ್ತ ಮುತ್ತಲಿನ ಕೃಷಿ ಭೂಮಿ, ಪರಿಸರಕ್ಕೆ ಮಾರಕವಾಗಿ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಘನ ತ್ಯಾಜ್ಯ ಘಟಕ / ಕಸ ವಿಲೇವಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಹಾನಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಮತ್ತು ಸಾಲಿಗ್ರಾಮ, ಪಾರಂಪಳ್ಳಿ ಗ್ರಾಮಸ್ಥರು, ಇದೇ ಜಾಗದಲ್ಲಿ ಈ ಹಿಂದೆ ಮೀನು ಸಂಸ್ಕರಣ ಘಟಕವನ್ನು ಪ್ರಾರಂಭಿಸಿದಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಿರ್ಮಾಣದ ಹಂತದಲ್ಲಿದ್ದ ಮೀನು ಸಂಸ್ಕರಣ ಘಟಕವನ್ನು ಮುಚ್ಚಿಸಿದ್ದರು. ಕಾನೂನಿನ ಪ್ರಕಾರ ಸಿ ಆರ್ ಝೆಡ್ ಪ್ರದೇಶದಲ್ಲಿ, ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ, ಹಾಗೆಯೇ ಎಸ್.ಡಬ್ಲ್ಯೂ.ಎಂ ಅಡಿಯಲ್ಲಿ ಕೃಷಿಭೂಮಿಯ ಬಳಿ ತ್ಯಾಜ್ಯ ನಿರ್ವಹಣೆ ಘಟಕ ಮಾಡುವಂತಿಲ್ಲ. ಆದರೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಸಮೇತ ಈ ಜಾಗ ಖರೀದಿಸಿದ್ದು ಹೇಗೆ, ಇಲ್ಲಿ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಹಾಗೂ ದೊಡ್ಡ ಮಟ್ಟದಲ್ಲಿ ರಾಜಕೀಯ ನಾಯಕರ ಸಮೇತ ಭ್ರಷ್ಟಾಚಾರ ನಡೆದಿರುವುದು ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಹಲವಾರು ವರ್ಷಗಳ ಹಿಂದೆ ಹಚ್ಚ ಹಸಿರಾಗಿರುವ ಈ ಪ್ರದೇಶ ಈಗ ರೋಗ ರುಜಿನಗಳ ಊರಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಉದ್ಘಾಟನೆಗೆ ಸಮಯ ನಿಗದಿ ಆಗಿದ್ದು, ಉದ್ಘಾಟನೆಗೆ ಬರುವ ಮುಖ್ಯ ಅತಿಥಿಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್ ಉದ್ಘಾಟಿಸಲು ಹೊರಟಿರುವ  ಎಸ್.ಡಬ್ಲ್ಯೂ.ಎಂ ಘಟಕ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.

ಇಲ್ಲಿನ ಸರ್ವೇ ನಂ 104/24, 25 ಜಾಗದ ಭೂ ಪರಿವರ್ತನೆಯಾಗಿಲ್ಲ, ಇ- ಖಾತೆಯೂ ಆಗಿಲ್ಲ. ಆದರೂ ಪಟ್ಟಣ ಪಂಚಾಯತ್ ಭೂಮಿ ಖರೀದಿಸಿದ್ದು, ಕಂದಾಯ ಇಲಾಖೆಯ ಲ್ಯಾಂಡ್ ರೆವೆನ್ಯೂ ಆಕ್ಟ್ 1964 ಅಡಿ ಪ್ರಕಾರ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ಸಿ ಆರ್ ಝೆಡ್ ನಿಂದ ಪರವಾನಿಗೆ ಪಡೆಯದೆ ಎಸ್.ಡಬ್ಲ್ಯೂ.ಎಂ ನಿರ್ಮಾಣ (ಘನ ತ್ಯಾಜ್ಯ ಘಟಕ ನಿರ್ಮಾಣ) ಮಾಡಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೇ ಈ ಜಾಗದ ರಸ್ತೆ‌ ಖಾಸಗೀ ವ್ಯಕ್ತಿಗಳಿಗೆ ಸೇರಿದ್ದು, ಸಿಆರ್ಝೆಡ್ ನಿಯಮದಂತೆ ನದಿಯ ಭರತ ರೇಖೆಯಿಂದ 50 ಮೀಟರ್ ಒಳಗಡೆ ಯಾವುದೇ ಚಟುವಟಿಕೆ ನಡೆಸಲು ಕರಾವಳಿ ನಿಯಂತ್ರಣ ವಲಯ ಒಪ್ಪಿಗೆ ನೀಡುವುದಿಲ್ಲ. 2013ರಲ್ಲಿ ಐಎಎಸ್ ಅಧಿಕಾರಿ ಟಿಎಂರೇಜು ಅವರು ಸರ್ವೇ ನಂ 104/24,25 ರಲ್ಲಿದ್ದ ಈ ಹಿಂದಿನ ಕಟ್ಟಡವನ್ನು ಅನಧಿಕೃತ ಕಟ್ಟಡ ಎಂದು ಘೋಷಣೆ ಮಾಡಿದ್ದರು. ಅಲ್ಲದೇ ಕುಂದಾಪುರದ ಜೆಎಂಸಿ ಕೋರ್ಟ್ ಅದನ್ನು ಎತ್ತಿ ಹಿಡಿದು ಹಿಂದಿನ ಕಟ್ಟಡದ ಮಾಲೀಕನಿಗೆ 15 ಸಾವಿರ ದಂಡ ವಿಧಿಸಿತ್ತು. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಪಟ್ಟಣ ಪಂಚಾಯತ್ ಖರೀದಿ ಮಾಡಿದ್ದು ಕಾನೂನು ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಈಗಾಗಲೇ ಊಳ್ಳೂರು 219/2 ಈ ಸರ್ವೇ ನಂಬರ್ ನಲ್ಲಿ ಕಸ ವಿಲೇವಾರಿ ಮಾಡಬೇಕು ಎಂದು ಸೀನಿಯರ್ ಸಿವಿಲ್ ಕೋರ್ಟ್ ಆದೇಶ ಮಾಡಿದೆ, ಆದರೆ ಅದನ್ನು ಬಿಟ್ಟು ಇಲ್ಲಿ ಘಟಕ ಸ್ಥಾಪನೆಗೆ ಮುಂದಾಗಿರುವುದು ಭ್ರಷ್ಟಾಚಾರ ನಡೆಸಿರುವ ಶಂಕೆ ಮೂಡಿದೆ ಎಂದಿದ್ದಾರೆ. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಒಪ್ಪಿಗೆ ಪತ್ರ ಪಡೆಯದೆ ಘನ ತ್ಯಾಜ್ಯ ವಿಲೇವಾರಿ ಮಾಡಲಾಗಿದ್ದು ಇದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದ ನಾಗೇಂದ್ರ ಪುತ್ರನ್, ಜಾಗ ಖರೀದಿ ಅವ್ಯವಹಾರ ಕುರಿತು ಕರ್ನಾಟಕ ಉಪ ಲೋಕಾಯುಕ್ತರು ತನಿಖೆಗೆ ಆದೇಶ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ. ಪಟ್ಟಣ ಪಂಚಾಯತ್ ಮೇಲಿನ ಆರೋಪ ಸಾಬೀತಾದರೆ ಭೂ ಅವ್ಯವಹಾರದ ಜೊತೆಗೆ ಸಾರ್ವಜನಿಕರ ಸುಮಾರು 1.8 ಕೋಟಿ ರೂಪಾಯಿ ತೆರಿಗೆ ಹಣ ದುಂದು ವೆಚ್ಚ ಮಾಡಿದಂತೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಿ ನಿರ್ಧಾರಕ್ಕೆ ಬರದೇ ಇದ್ದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ನಡೆಸುತ್ತಾರೆ. ಉದ್ಘಾಟನೆಯ ದಿನವೇ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮಹೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ನಾಗರಾಜ್, ಗಣೇಶ್ ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!