ಕಾರ್ಕಳ: ಹದಿಮೂರು ವರ್ಷಗಳ ಹಿಂದೆ ನಾಪತ್ತೆಯಾದ ವಿದ್ಯಾರ್ಥಿಯನ್ನು ಪತ್ತೆಹಚ್ಚಿ ಮನೆಯವರಿಗೊಪ್ಪಿಸಿದ ಪೊಲೀಸರು!
ಏನಿದು ಸ್ಟೋರಿ? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ

ಉಡುಪಿ: ಕಾರ್ಕಳದ ಮಂಡ್ಕೂರಿನಲ್ಲಿರುವ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿರುವಾಗ ಕಾಲೇಜಿನಲ್ಲಿ ಉಪನ್ಯಾಸಕಿಯೊಬ್ಬರು ಬೈದರು ಎಂಬ ಕಾರಣಕ್ಕೆ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾದ ಯುವಕನನ್ನು ಬುಧವಾರ ಉಡುಪಿ ಜಿಲ್ಲಾ ಪೊಲೀಸ್ ತಂಡ ಪತ್ತೆ ಹಚ್ಚಿ ಮನೆಯವರಿಗೆ ಒಪ್ಪಿಸಿದ್ದಾರೆ.

ಕಾರ್ಕಳ ತಾಲೂಕಿನ ಮಂಡ್ಕೂರು ನಿವಾಸಿ ಪ್ರಭಾಕರ ಪ್ರಭು ಎಂಬುವರ ಪುತ್ರ ಅನಂತಕೃಷ್ಣ ಪ್ರಭು ನಾಪತ್ತೆಯಾಗಿ ಪೊಲೀಸರ ಶೋಧಕಾರ್ಯದ ಬಳಿಕ ಪತ್ತೆಯಾಗಿ ಕುಟುಂಬ ಸೇರಿದವನು. ನಾಪತ್ತೆಯಾಗಿದ್ದ ಅನಂತ ಕೃಷ್ಣ ಪ್ರಭುನನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ ಟಿ, ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಸುದರ್ಶನ್ ದೊಡಮನಿ, ಉಡುಪಿ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಈರಣ್ಣ ಶಿರಗುಂಪಿ, ಬ್ರಹ್ಮಾವರ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಮ್ರಾನ್, ಮಣಿಪಾಲ ಠಾಣೆಯ ಹೆಡ್ ಕಾನ್ಸ್ಟೇಬಲ್ ಚೇತನ್, ಕುಂದಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಂತೋಷ್ ದೇವಾಡಿಗ ಮತ್ತು ಉಡುಪಿ ಠಾಣೆಯ ಕಾನ್ಸ್ಟೇಬಲ್ ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಭಾಗವಹಿಸಿದ್ದರು.
ಎಸ್. ಇದೊಂದು ಅಪರೂಪದ ಸ್ಟೋರಿ. ಹಾಗಿದ್ರೆ ಅನಂತಕೃಷ್ಣ ಪ್ರಭು ಯಾಕೆ ಮನೆ ಬಿಟ್ಟು ಹೋದ?. ಆಮೇಲೆ ಏನೇನಾಯ್ತು? ಕೊನೆಗೆ ಪೊಲೀಸರು ಆತನನ್ನು ಹೇಗೆ ಪತ್ತೆ ಹಚ್ಚಿದರು? ಎನ್ನುವ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ನೋಡಿ ಪೂರ್ತಿ ಸ್ಟೋರಿ…
ಅನಂತ ಕೃಷ್ಣ ಪ್ರಭು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪ್ರಭಾಕರ ಪ್ರಭು ಮುಂಡ್ಕೂರಿನಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ಮರ್ಯಾದಸ್ಥ ಕುಟುಂಬ. ಯಾರೊಡನೆಯೂ ನಿಷ್ಟುರವಿಲ್ಲ. ಎಲ್ಲರನ್ನೂ ಮನೆಯವರಂತೆಯೇ ಕಂಡ ಕುಟುಂಬವದು. ನೆರೆಕರೆಯವರಲ್ಲಿಯೂ ಅನ್ಯೋನ್ಯವಾಗಿದ್ದವರು. ಪ್ರಭಾಕರ ಪ್ರಭು ದಂಪತಿಗಳಿಗೆ ಇದ್ದಿದ್ದು ಒಬ್ಬನೇ ಮಗ. ಆತನೇ ಅನಂತ ಕೃಷ್ಣ ಪ್ರಭು. ತಂದೆ ತಾಯಿಯರಂತೆ ಅನಂತಕೃಷ್ಣನೂ ಮೃದು. ರಜೆ ಬಂತೆಂದರೆ ತನ್ನ ತಾಯಿಯ ಮನೆಯಾದ ಬೆಳ್ತಂಗಡಿಗೆ ಹೋದರೆ ರಜೆ ಮುಗಿದ ಬಳಿಕ ಹಿಂತಿರುಗುತ್ತಿದ್ದ. ಮಂಡ್ಕೂರಿನಲ್ಲಿರುವ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಬಾಲ್ಯದಿಂದಲೇ ಅತೀ ಸೂಕ್ಷ್ಮ ಬಾಲಕನಾಗಿದ್ದ ಅನಂತಕೃಷ್ಣನಿಗೆ ಅದೇನಾಯ್ತೋ ಗೊತ್ತಿಲ್ಲ! ಅಂದು 2012ರ ಡಿಸೆಂಬರ್ 6ರ ಗುರುವಾರ ಎಂದಿನಂತೆ ಕಾಲೇಜಿಗೆ ಹೋಗಿದ್ದ ಅನಂತಕೃಷ್ಣ ಪ್ರಭುವಿಗೆ ಕಾಲೇಜಿನ ಉಪನ್ಯಾಸಕರೊಬ್ಬರು ಬೈಯ್ತಾರೆ. ಈ ಘಟನೆಯಿಂದ ತರಗತಿಯ ಅನಂತ ಕೃಷ್ಣನಿಗೆ ಇತರ ವಿದ್ಯಾರ್ಥಿಗಳ ಎದುರು ಅತೀವವಾದ ಅವಮಾನವಾಗುತ್ತದೆ. ಮನೆಯಲ್ಲಿ ಹೇಳಿದರೆ ಅಪ್ಪ ಅಮ್ಮ ಬೇಸರ ಮಾಡಿಕೊಳ್ಳುತ್ತಾರೆ. ಕಾಲೇಜಿಗೆ ಹೋದರೆ ಸಹಪಾಠಿಗಳ ಮುಖ ನೋಡಲೂ ಸಾಧ್ಯವಿಲ್ಲ ಎಂದುಕೊಂಡ ಅನಂತ ಕೃಷ್ಣ ಒಂದು ದೃಢ ನಿರ್ಧಾರಕ್ಕೆ ಬಂದುಬಿಡುತ್ತಾನೆ. ಕಾಲೇಜಿನಿಂದ ಮನೆಗೆ ಬಂದ ಅನಂತಕೃಷ್ಣ ಸಂಜೆ ಸಮೀಪದ ಮುಂಡ್ಕೂರು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರಹೋಗುತ್ತಾನೆ.
ಆದರೆ ಹಾಗೇ ಹೇಳಿ ಹೋದ ಪ್ರಭಾಕರ ಪ್ರಭುಗಳ ಮಗ ಅನಂತಕೃಷ್ಣನಿಗೆ ಆಗ ಕೇವಲ 16 ವರ್ಷ. ಮನೆಗೆ ಬಾರದಿದ್ದಾಗ ಮನೆಯವರಿಗೆ ಸ್ವಾಭಾವಿಕವಾಗಿಯೇ ಗಾಭರಿಯಾಗುತ್ತದೆ. ಸುತ್ತಮುತ್ತೆಲ್ಲಾ ವಿಚಾರಿಸುತ್ತಾರೆ. ಆಗ ಯಾರೋ ಒಬ್ಬರು ಬಸ್ಸಿನಲ್ಲಿ ಅನಂತಕೃಷ್ಣ ಮಂಗಳೂರು ಕಡೆಗೆ ಹೋಗಿರುವುದನ್ನು ತಿಳಿಸುತ್ತಾರೆ. ಮಂಗಲೂರಿನಲ್ಲಿಯೂ ಹಲವೆಡೆ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ದಿಕ್ಕು ಕಾಣದಾದ ಪ್ರಭು ಕುಟುಂಬ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸುತ್ತಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಎಷ್ಟು ಹುಡುಕಾಡಿದರೂ ನಾಪತ್ತೆಯಾದ ಅನಂತಕೃಷ್ಣನ ಸುಳಿವೇ ಸಿಗುವುದಿಲ್ಲ. ಪ್ರಭಾಕರ ಪ್ರಭುಗಳ ಕುಟುಂಬ ಹಲವು ದೇವಸ್ಥಾನಗಳಿಗೆ ಹರಕೆ ಹೊರುತ್ತಾರೆ. ಜ್ಯೋತಿಷ್ಇಗಳ ಬಳಿ ಹೋಗುತ್ತಾರೆ. ಅಲ್ಲೆಲ್ಲಾ ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ಮನೆಗೆ ವಾಪಾಸ್ಸು ಬರುತ್ತಾನೆ ಎಂದಿದ್ದಾರೆ. ಆದರೆ ಅನಂತಕೃಷ್ಣ ಮಾತ್ರ ಪತ್ತೆಯಾಗುವುದಿಲ್ಲ.
ಹಾಗಾದರೆ ಅನಂತಕೃಷ್ಣ ಪ್ರಭು ಎಲ್ಲಿ ಹೋದ? ಆ ಸ್ಟೋರಿ ಇಲ್ಲಿದೆ ನೋಡಿ..
ಕಾಲೇಜಿನಲ್ಲಿ ನಡೆದಿದ್ದ ಆ ಘಟನೆ ಬಾಲಕ ಅನಂತಕೃಷ್ಣ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಯಾವುದೇ ಕಾರಣಕ್ಕೂ ಇನ್ನುಮುಂದೆ ಆ ಕಾಲೇಜಿಗೆ ಹೋಗಬಾರದು ಎಂದು ತೀರ್ಮಾನಿಸುತ್ತಾನೆ. ಆದರೆ ಕಲಿಕೆಯ ಹಂಬಲ ಆತನಲ್ಲಿ ಹೆಚ್ಚಾಗುತ್ತದೆ. ಮನೆಯಿಂದ ಹೊರಟ ಅನಂತಕೃಷ್ಣ ನೇರವಾಗಿ ಮಂಗಳೂರಿಗೆ ಖಾಸಗೀ ಬಸ್ಸಿನಲ್ಲಿ ಹೋಗುತ್ತಾನೆ. ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಾನೆ. ಬಳಿಕ ಬೆಂಗಳೂರು ರೈಲ್ವೇ ನಿಲ್ದಾಣ ತಲುಪಿದ ಅನಂತಕೃಷ್ಣಗೆ ಒಂದು ಕಡೆಯಿಂದ ಹಸಿವು ಇನ್ನೊಂದು ಕಡೆಯಿಂದ ನೆಲೆ.. ಈ ಎರಡು ಸಮಸ್ಯೆಗಳು ಬಾಧಿಸಲಾರಂಭಿಸುತ್ತವೆ. ಆರಂಭದಲ್ಲಿ ರೈಲ್ವೇ ನಿಲ್ದಾಣದಲ್ಲಿ ಕೆಲಸಕ್ಕಾಗಿ ಅಲೆದಾಡುತ್ತಾನೆ. ನೋಡಲು ಸ್ಪುರದ್ರೂಪಿ ಬಾಲಕ. ಆದರೆ ವಯಸ್ಸು ಚಿಕ್ಕದಾಗಿರುವ ಕಾರಣಕ್ಕೆ ಯಾವುದೇ ಕೆಲಸ ಸಿಗುವುದಿಲ್ಲ. ಬಳಿಕ ಅಲ್ಲಿಂದ ಬೆಂಗಳೂರು ಪೇಟೆಯತ್ತ ನಡೆಯುತ್ತಾನೆ. ಕೆಲವು ದಿನಗಳ ಕಾಲ ಬೆಂಗಳೂರಿನ ಹೋಟೆಲ್ಲೊಂದರಲ್ಲಿ ಕೆಲಸ ಮಾಡುತ್ತಾನೆ. ಆದರೆ ಅದೇಕೊ ಆತನಿಗೆ ಸಮಾಧಾನ ಕಾಣಲಿಲ್ಲ. ಅಲ್ಲಿಂದ ಸಕಲೇಶಪುರಕ್ಕೆ ಹೋಗುತ್ತಾನೆ. ಅಲ್ಲಿ ಒಬ್ಬರ ಪರಿಚಯವಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಾನೆ. ಬಾಲಕನ ಒಳ್ಳೆಯತನ ಕಂಡು ಖುಷಿಗೊಂಡ ಮಾಲಕರು ಆತನ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿ ತನ್ನ ಜೊತೆಗೆ ಇಟ್ಟುಕೊಂಡು ಓದಿಸುತ್ತಾರೆ. ಅನಂತಕೃಷ್ಣ ಪ್ರಭು ಆಟೋಕ್ಯಾಡ್ ಕಲಿತು ಕೆಲಸ ಹಿಡಿಯುತ್ತಾನೆ. ಆದರೆ ಬಾಲಕ ಮಾತ್ರ ತನ್ನ ಮನೆಯವರ ಬಗ್ಗೆ ಸುಳಿವು ಕೊಡುವುದಿಲ್ಲ. ಬಳಿಕ ಅಲ್ಲಿಂದ ಮೈಸೂರಿಗೆ ಹೋದ ಅನಂತ ಕೃಷ್ಣ ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ ಮತ್ತೆ ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಮತ್ತೆ ಬೆಂಗಳೂರಿಗೆ ಬಂದ. ಆಗ ಅಲ್ಲಿ ಕೇರಳ ಮೂಲದ ಅಶೋಕನ್ ಎಂಬುವರ ಪರಿಚಯವಾಗುತ್ತದೆ. ಅವರ ಜೊತೆಗೆ ಸಲುಗೆ ಬೆಳೆಸಿಕೊಂಡ ಅನಂತಕೃಷ್ಣ ತನ್ನ ಮನೆಯ ಕತೆ ಹೇಳುತ್ತಾನೆ. ಕುತೂಹಲಗೊಂಡ ಅಶೋಕನ್ ಅನಂತಕೃಷ್ಣನ ಮನೆಗೆ ಬಂದು ವಿಚಾರಿಸುತ್ತಾರೆ. ಆದರೆ ಅನಂತಕೃಷ್ಣ ಎಲ್ಲಿದ್ದಾನೆ ಎನ್ನುವುದನ್ನು ಹೇಳುವುದಿಲ್ಲ. ವಾಪಾಸು ಬೆಂಗಳೂರಿಗೆ ಬಂದ ಅಶೋಕನ್ ಪ್ರಭಾಕರ ಪ್ರಭುಗಳಿಗೆ ಮೊಬೈಲ್ ಕರೆ ಮಾಡಿ ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ಆದರೆ ಈಗ ಮನೆಗೆ ಬರಲು ಒಪ್ಪುತ್ತಿಲ್ಲ. ಅವನನ್ನು ಒಪ್ಪಿಸಿ ಕಳಿಸಿಕೊಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾರೆ.
ಈ ವಿಚಾರ ಪೊಲೀಸರಿಗೆ ತಿಳಿಯುತ್ತದೆ. ಕೆಲವು ದಿನಗಳ ಬಳಿಕ ಅಶೋಕನ್ ಮಾಡಿದ್ದ ಕರೆಯ ಸಂಖ್ಯೆ ಬೆನ್ನತ್ತಿದ್ದ ಪೊಲೀಸರಿಗೆ ಮತ್ತೆ ಆಘಾತವಾಗುತ್ತದೆ. ಅಶೋಕನ್ ಕರೆ ಮಾಡಿದ ಕೆಲವೇ ದಿನಗಳಲ್ಲಿ ಆತ ನಿಧನಹೊಂದಿದ್ದರು. ಅಶೋಕನ್ ನಿಧನವಾದ ಬಳಿಕ ಅನಂತಕೃಷ್ಣ ಪ್ರಭು ಅವರ ಮನೆ ಬಿಟ್ಟು ಹೋಗಿದ್ದ. ಕಂಪೆನಿಯೊಂದರಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಅನಂತಕರಷ್ಣ ಪ್ರಭು ಫ್ಲ್ಯಾಟ್ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಅಶೋಕನ್ ನಂಬರ್ ಬೆನ್ನತ್ತಿದ ಪೊಲೀಸರು ಅಶೋಕನ್ ಹೆಂಡತಿ ಮತ್ತು ಮಗನನ್ನು ಪತ್ತೆ ಹಚ್ಚಿದಾಗ ಅನಂತಕೃಷ್ಣ ಪ್ರಭು ಮನೆ ಬಿಟ್ಟು ಹೋಗಿರುವುದು ತಿಳಿದಿದೆ. ಬಳಿಕ ಆತ ಕೆಲಸ ಮಾಡುವ ಕಂಪೆನಿಗೆ ತನಿಖಾ ತಂಡ ಭೇಟಿ ನೀಡಿ ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಮಾತನಾಡಿದ್ದ ಅನಂತ ಕೃಷ್ಣ ಪ್ರಭು, ಉದ್ಯೋಗ ಪಡೆದು ಸ್ವಂತ ಕಾಲಿನ ಮೇಲೆ ನಿಂತು ಸಾಧನೆ ಮಾಡಿದ ಬಳಿಕ ತನ್ನ ಅಪ್ಪ ಅಮ್ಮನನ್ನು ಭೇಟಿ ಮಾಡಬೇಕು ಎಂದು ತೀರ್ಮಾನಿಸಿದ್ದನಂತೆ. ಅದರಂತೆ ಫ್ಲ್ಯಾಟ್ ಬಾಡಿಗೆ ಪಡೆದಿದ್ದು, ಕಾರು ಖರೀದಿಸಿದ ಬಳಿಕ ಊರಿಗೆ ಹೋಗಿ ಅಪ್ಪ ಅಮ್ಮನಿಗೆ ಮುಖ ತೋರಿಸಬೇಕು ಎಂದುಕೊಂಡಿದ್ದನಂತೆ. ಆದರೆ ಇದಕ್ಕೂ ಮೊದಲು ಹಲವು ಬಾರಿ ಅನಂತಕೃಷ್ಣ ಪ್ರಭು ಮುಂಡ್ಕೂರಿಗೆ ಬಂದಿದ್ದು, ಅಪ್ಪ ಅಮ್ಮನನ್ನು ದೂರದಿಂದಲೇ ನೋಡಿಕೊಂಡು ಸಮಾಧಾನಪಟ್ಟುಕೊಂಡು ಹೋಗುತ್ತಿದ್ದ ಎಂದು ಹೇಳಿದ್ದಾನೆ. ಆದರೆ ಸಾಧನೆ ಮಾಡಿಯೇ ಮುಖ ತೋರಿಸಬೇಕು ಎಂದುಕೊಂಡಿದ್ದ ಎಂದು ತಿಳಿಸಿದ್ದಾನೆ. ಆದರೆ ಅದಾಗಲೇ ಪೊಲೀಸರು ಆತನನ್ನು ಅಧಿಕೃತವಾಗಿ ಪತ್ತೆ ಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಒಳಗಾಗಿದ್ದಾರೆ. ಜೊತೆಗೆ 13 ವರ್ಷಗಳ ಹಿಂದಿನ ಪ್ರಕರಣವೊಂದನ್ನು ಸುಖಾಂತ್ಯಗೊಳಿಸಿದ್ದಾರೆ. ಸಧ್ಯ ಪ್ರಭಾಕರ ಪ್ರಭು ಕುಟುಂಬ ಖುಷಿಗೊಂಡಿದ್ದು, ಮಗನೊಂದಿಗೆ ಟೆಂಪಲ್ ರನ್ ಮಾಡುತ್ತಿದ್ದಾರೆ.
