BlogCulturalEconomyFashionHighlightsHuman storiesLifestyleLocal newsOthersSuccess storiesTop StoriesTrending

ನೋವಿಗೆ ಮಿಡಿದ ಕೋಟ ‘ಜೀವನ್‌ ಮಿತ್ರ’ ತಂಡ: ಅನಾರೋಗ್ಯಪೀಡಿತರ ಚಿಕಿತ್ಸೆಗೆ ನೆರವು

Aware others:

ಕುಂದಾಪುರ: ಕೋಟ ಭಾಗದಲ್ಲಿ ಜನರ ನೋವಿಗೆ ಸ್ಪಂದಿಸುವ ಮೂಲಕ  ಜನಪರ ಕಾರ್ಯಗಳಿಗೆ ಹೆಸರಾದ ‘ಜೀವನ್‌ ಮಿತ್ರ ಸೇವಾ ಟ್ರಸ್ಟ್‌’ ಇನ್ನೊಬ್ಬರ ಜೀವ ಉಳಿಸಲು ಆಪತ್ಬಾಂಧವನಂತೆ ನಿಂತಿದೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕೋಟತಟ್ಟು ಪಡುಕೆರೆಯ ವಿಜಯ್ ಪೂಜಾರಿ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಟ್ರಸ್ಟ್ ಕಾರ್ಯಕರ್ತರು ಮತ್ತು ಸ್ನೇಹಿತರು ಸೇರಿಕೊಂಡು ಆಗಸ್ಟ್ 20 ರ ಬುಧವಾರ ಸಾಸ್ತಾನ ಟೋಲ್ ಗೇಟ್ ಬಳಿ ‘ಜೀವನ್‌ ಮಿತ್ರ ಸೇವಾ ಟ್ರಸ್ಟ್‌’ಮತ್ತು ವಿಜಯ್ ಪೂಜಾರಿ ಅವರ ಸ್ನೇಹಿತರು ಸೇರಿ ಹಣ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡರು. ಪರಿಣಾಮವಾಗಿ ಸಂಗ್ರಹವಾದ ರೂ. 69,000 ವನ್ನು ವಿಜಯ್ ಪೂಜಾರಿಯವರ ಕುಟುಂಬಕ್ಕೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ಕೋಟ ಅಮೃತೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಜೀವನ್‌ ಮಿತ್ರ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಸಂತೋಷ ತಂದಿದೆ ಎಂದರು.

ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಆಚಾರ್ ಮಾತನಾಡಿ, ಕೋಟ ಭಾಗದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಬಂದಾಗ ತಕ್ಷಣ ನೆರವಿಗೆ ಧಾವಿಸುವ ಒಂದು ಸಂಸ್ಥೆ ಇದೆ ಎಂದಾದರೆ ಅದು ಜೀವನ್‌ ಮಿತ್ರ. ಇಂತಹ ಸಂಸ್ಥೆಯು ನಮ್ಮೂರಿನ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು. ಜೀವನ್‌ ಮಿತ್ರ ಸೇವಾ ಟ್ರಸ್ಟ್‌ ಮುಖ್ಯಸ್ಥ ನಾಗರಾಜ್ ಪುತ್ರನ್ ಅವರು ಮಾತನಾಡಿ, ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಹುಂಡಿ ಮೂಲಕ ಸಂಗ್ರಹಿಸಲಾದ 60,000 ಮತ್ತು ಗೂಗಲ್ ಪೇ ಮೂಲಕ ವರ್ಗಾವಣೆಯಾದ 9,000 ಸೇರಿದಂತೆ ಒಟ್ಟು 69,000 ಮೊತ್ತವನ್ನು ವಿಜಯ್ ಪೂಜಾರಿಯವರ ಚಿಕಿತ್ಸಾ ವೆಚ್ಚಕ್ಕಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭ ನಾಗೇಂದ್ರ ಪುತ್ರನ್ ಕೋಟ, ವಸಂತ ಸುವರ್ಣ ಕೋಟ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಪಡುಕೆರೆ, ಚಂದ್ರ ಪೂಜಾರಿ, ನಾಗರಾಜ್ ಸೈಬ್ರಕಟ್ಟೆ, ಪ್ರದೀಪ್ ಮೆಂಡನ್, ರಾಕೇಶ್ ಹಂದಟ್ಟು, ಭರತ್ ಗಾಣಿಗ, ಸುರೇಶ್ ಗಾಣಿಗ, ಧನುಷ್ ವಡ್ಡರ್ಸೆ, ಕಿಶೋರ್ ಶೆಟ್ಟಿ ಚಿತ್ರಪಾಡಿ ಹಾಗೂ ಇತರರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!