ವಿದ್ಯಾರಣ್ಯ ಅಂಗಳದಲ್ಲಿ ʼಮುದ್ದುಕೃಷ್ಣʼರ ಕಲರವ – ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಮಗ್ರ ವ್ಯಕ್ತಿತ್ವ -‘ಸು ಫ್ರಮ್ ಸೋ’ ರವಿಯಣ್ಣ
ಕುಂದಾಪುರ: ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಶಾಲೆಯ ಅಂಗಳದಲ್ಲಿ ಕೃಷ್ಟಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಮುದ್ದುಕೃಷ್ಣ ಸ್ಪರ್ಧೆ ಕಾರ್ಯಕ್ರಮ ಭಾನುವಾರ ವಿದ್ಯಾರಣ್ಯದಲ್ಲಿ ನಡೆಯಿತು.




ಉದ್ಘಾಟಿಸಿದ ‘ಸು ಫ್ರಮ್ ಸೋ’ ಸಿನಿಮಾ ನಟ ಸನಿಲ್ ಗೌತಮ್ (ರವಿಯಣ್ಣ) ಮಾತನಾಡಿ, ಸಾಂಸ್ಕೃತಿಕ ಸ್ಪರ್ಧಾ ವೇದಿಕೆಗಳು ಮಕ್ಕಳ ಪ್ರತಿಭೆಯನ್ನು ಹೊರತರಲು ಸಹಾಯಕವಾಗುತ್ತವೆ. ಮಕ್ಕಳೊಳಗಿನ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ. ಇದರಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.





ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿ ಹಾಗೂ ಆಚರಣೆಯ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ಇಂತಹ ವೇದಿಕೆಯನ್ನು ಕಲ್ಪಿಸಿದರೆ ಅವರ ವ್ಯಕ್ತಿತ್ವ ಸಮಗ್ರವಾಗಿ ರೂಪುಗೊಳ್ಳಲು ಅನುಕೂಲವಾಗುತ್ತದೆ ಎಂದರು.




ಖಜಾಂಚಿ ಭರತ್ ಶೆಟ್ಟಿ ಅವರು ಮಾತನಾಡಿ, ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಶ್ರೀಕೃಷ್ಣನು ನಮ್ಮೆಲ್ಲರ ಬದುಕಿಗೂ ಆದರ್ಶವಾಗಬೇಕು. ದೇವರ ಸ್ವರೂಪವಾದ ಮಕ್ಕಳಿಗೆ ಎಳವೆಯಿಂದಲೇ ಸಂಸ್ಕೃತಿ-ಸಂಸ್ಕಾರದ ಅರಿವು ಮೂಡಿಸಿದರೆ ಮುಂದೆ ಅವರು ಒಳ್ಳೆಯ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.






ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ಮಕ್ಕಳಿಗೆ ಕೃಷ್ಣ ವೇಷ ಹಾಕಿ ಸಂಭ್ರಮಿಸುವುದೆಂದರೆ ಪ್ರತಿ ತಾಯಿಗೂ ಹಬ್ಬದ ಕ್ಷಣವಾಗಿರುತ್ತದೆ. ತನ್ನ ಮಗುವಿನಲ್ಲಿ ತಾಯಿ ಕೃಷ್ಣನನ್ನು ಕಣ್ತುಂಬಿಕೊಳ್ಳುತ್ತಾಳೆ. ಎಲ್ಲಾ ಮಕ್ಕಳು ಕೃಷ್ಣನ ವ್ಯಕ್ತಿತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.





ಸೀನಿಯರ್ ಹಾಗೂ ಜ್ಯೂನಿಯರ್ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ರೂ.10,000, ದ್ವಿತೀಯ ರೂ.7,500 ಹಾಗೂ ತೃತೀಯ ರೂ.5,000 ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣ ನೀಡಲಾಯಿತು.





ಸೀನಿಯರ್ ನಲ್ಲಿ ವೈ. ಆರಾಧ್ಯ ಭಟ್ ಪ್ರಥಮ, ಶ್ರೀಯಾ ಕಾಂಚನ್ ದ್ವೀತಿಯ, ವೃಷಾಲಿ ಶಾಸ್ತ್ರಿ ತೃತೀಯ ಸ್ಥಾನ ಪಡೆದರು. ಜೂನಿಯರ್ ವಿಭಾಗದಲ್ಲಿ ಆಕೃತಿ .ಎ ಪೂಜಾರಿ ಪ್ರಥಮ, ಶ್ರೀದ ಕೆ.ಕಾಂಚನ್ ದ್ವೀತಿಯ, ಲಕ್ಷ್ಯ ಜೆ.ಕೆ. ತೃತೀಯ ಸ್ಥಾನ ಪಡೆದರು. ಭಾಗವಹಿಸಿದ ಪ್ರತಿ ಸ್ಪರ್ಧಿಗೂ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಲಾಯಿತು.





ಭರತನಾಟ್ಯ ಕಲಾವಿದ ವಿದ್ವಾನ್ ಕೆ.ಭವಾನಿ ಶಂಕರ್, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಭರತನಾಟ್ಯ ಕಲಾವಿದೆ ವಿದ್ಯಾ ಸಂದೇಶ್, ಸಂಗೀತ ಶಿಕ್ಷಕಿ ಮತ್ತು ನೃತ್ಯಗಾರ್ತಿ ಮೀನಾ ಕಾರಂತ ಸಾಸ್ತಾನ ತೀರ್ಪುಗಾರರಾಗಿದ್ದರು.




ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯ ಪ್ರದೀಪ್ .ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರೀತಿ ಚಂದ್ರಶೇಖರ ಹಾಗೂ ವಿನುತಾ ಶೆಟ್ಟಿ ನಿರೂಪಿಸಿದರು.
