ಸ್ಕಾರ್ಪಿಯೋ ವಾಹನದಲ್ಲಿ ದನ ತುಂಬಿಸಿ ಸಾಗಾಟ – ಸ್ಕಾರ್ಪಿಯೋ ಸಹಿತ ಇಬ್ಬರು ಆರೋಪಿಗಳ ಬಂಧನ
ಕುಂದಾಪುರ: ಇಲ್ಲಿಗೆ ಸಮೀಪದ ಬಿದ್ಕಲ್ ಕಟ್ಟೆ ಎಂಬಲ್ಲಿ ಶನಿವಾರ ಬೆಳಗ್ಗಿನ ಜಾವ ರಸ್ತೆ ಬದಿಯಲ್ಲಿ ಮಲಗಿದ್ದ ದನವೊಂದನ್ನು ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ತುಂಬಿಸಿ ಕದ್ದೊಯ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮತ್ತು ಸ್ಕಾರ್ಪಿಯೋ ವಾಹನವನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೇಮಾರ ನಿವಾಸಿ ಅಬೂಬಕ್ಕರ್ ಎಂಬಾತನ ಮಗ ಇಮ್ರಾನ್ ಯಾನೇ ಕುಟ್ಟು (31) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮುಂದುಪುರ ಗ್ರಾಮ ಗಂಜಿಮಠದ ಆಜಾದ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತೀರದ ನಿವಾಸಿ ಎಮ್.ಪಿ ಇಸ್ಮಾಯಿಲ್ ಎಂಬಾತನ ಮಗ ಇರ್ಷಾದ್(30) ಎಂದು ಗುರುತಿಸಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಕೆಎ 12 ಎನ್ 5122 ನಂಬರಿನ ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಶನಿವಾರ ನಸುಕಿನ ಜಾವದಲ್ಲಿ ಹುಣ್ಸೆಮಕ್ಕಿ ಕಡೆಯಿಂದ ಒಂದು ಸ್ಕಾರ್ಪಿಯೊ ತರಹದ ನಾಲ್ಕು ಚಕ್ರದ ವಾಹನದಲ್ಲಿ ಯಾರೋ 3 ಜನ ಕಳ್ಳರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಿದ್ಕಲಕಟ್ಟೆ ಪೇಟೆಯ ಬಳಿ ವಾಹನದಿಂದ ಕೆಳಗೆ ಇಳಿದು ಅಲ್ಲಿಯೇ ಮಲಗಿದ್ದ ಒಂದು ಹಸುವನ್ನು ಹಿಡಿದು ಅದಕ್ಕೆ ಬಳ್ಳಿಯಿಂದ ಕುತ್ತಿಗೆಗೆ ಬಿಗಿದು ಅದನ್ನು ಹಿಂಸಾತ್ಮಕವಾಗಿ ಎಳೆದು ಅವರು ಬಂದಿರುವ ವಾಹನಕ್ಕೆ ತುಂಬಿಸಿ ಕಳವು ಮಾಡಿಕೊಂಡು ಬಿದ್ಕಲ ಕಟ್ಟೆಯಿಂದ ಶಿರಿಯಾರ ಕಡೆಗೆ ಹೋಗಿರುವುದು ಕೆಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜಯಪ್ರಕಾಶ್ ಶೆಟ್ಟಿ ಎಂಬುವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ಇಮ್ರಾನ್ ಯಾನೇ ಕುಟ್ಟು ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಹನ್ನೆರಡು ಪ್ರಕರಣಗಳು, ಮಂಗಳೂರು ಠಾಣೆಯಲ್ಲಿ ಮೂರು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಒಂದು, ಬಜ್ಪೆ ಠಾಣೆಯಲ್ಲಿ ಎರಡು, ಉಳ್ಳಾಲದಲ್ಲಿ ಎರಡು, ಕೊಣಾಜೆಯಲ್ಲಿ ನಾಲ್ಕು, ಸಕಲೇಶಪುರದಲ್ಲಿ ಎರಡು, ಶನಿವಾರ ಸಂತೆಯಲ್ಲಿ ಮೂರು, ಕುಶಾಲನಗರದಲ್ಲಿ ಮೂರು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಒಂದು, ಸುರತ್ಕಲ್ ನಲ್ಲಿ ಒಂದು ಸೇರಿದಂತೆ ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿವೆ.

ಮತ್ತೊಬ್ಬ ಆರೋಪಿ ಇರ್ಷಾದ್ ವಿರುದ್ಧ ಬಜ್ಪೆ ಠಾಣೆಯಲ್ಲಿ ಐದು, ಪುಂಜಾಲುಕಟ್ಟೆಯಲ್ಲಿ ಎರಡು, ಬಂಟ್ವಾಳದಲ್ಲಿ ಒಂದು, ಚಿಕ್ಕಮಗಳುರಿನಲ್ಲಿ ಎರಡು, ಕಾವೂರು ಠಾಣೆಯಲ್ಲಿ ಒಂದು, ಮೂಡಬಿದ್ರೆಯಲ್ಲಿ ಒಂದು, ವಿಟ್ಲ ಠಾಣೆಯಲ್ಲಿ ಒಮದು ಪ್ರಕರಣ ಸೇರಿದಂತೆ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
