ಅಂಕೋಲಾ: ಭೀಕರ ಬಸ್ ಅಪಘಾತ – ಹಳ್ಳಕ್ಕೆ ಬಿದ್ದ ಬಸ್ – ಒಬ್ಬ ಸಾವು, 18 ಮಂದಿಗೆ ಗಾಯ
ಅಂಕೋಲ: ಇಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಅಂಕೋಲಾ ತಾಲೂಕಿನ ಅಗಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು 18 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೆಳಗಾವಿಯಿಂದ ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ, ಕಿರು ಸೇತುವೆಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಬಿದ್ದಿದೆ.
ಗಾಯಗೊಂಡವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಐವರು ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.


ಅಪಘಾತ ಸಂಭವಿಸುತ್ತಿದ್ದಂತೆ, ದಿನಪತ್ರಿಕೆ ಸಾಗಾಟ ಮಾಡುವ ಚಾಲಕ ಸೈಯದ್ ಜಾಕಿರ್ ಇನಾಮ್‌ದಾರ, ಆಂಬ್ಯುಲೆನ್ಸ್ ವಾಹನಗಳು ಹಾಗೂ ಸ್ಥಳೀಯರು ಮತ್ತು ದಾರಿಹೋಕರು ತಕ್ಷಣವೇ ನೆರವಿಗೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಬಸ್ ಮೇಲಕ್ಕೆತ್ತುವ ಸಂದರ್ಭದಲ್ಲಿ ಬಸ್ಸಲ್ಲಿ ಸಿಲುಕಿಕೊಂಡಿದ್ದ ಓರ್ವನ ಮೃತದೇಹ ಹೊರತೆಗೆಯಲಾಯಿತು. ಚಾಲಕನ ನಿರ್ಲಕ್ಷ್ಯ ಮತ್ತು ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಅನೇಕ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಹಳ್ಳಕ್ಕೆ ಬಿದ್ದರೂ ಬಹುತೇಕ ಪ್ರಯಾಣಿಕರು ಅಪಾಯದಿಂದ ಪಾರಾಗಿರುವುದು ನೆಮ್ಮದಿಯ ಸಂಗತಿಯಾಗಿದೆ. ಘಟನೆ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
