ಶಿರೂರು ಮೂರ್ಕೈ : ದನ ಕದ್ದೊಯ್ದ ಪ್ರಕರಣ – ಕಾರು ಸಹಿತ ಇಬ್ಬರ ಬಂಧನ, ಒಬ್ಬ ಪರಾರಿ

ಕುಂದಾಪುರ: ಜುಲೈ 20ರಂದು ಶಿರೂರು ಮೂರು ಕೈ ಪೇಟೆಯ ನೀರ್ ಜೆಡ್ಡು ಎಂಬಲ್ಲಿ ಹೋಸಾ ರಸ್ತೆಯ ಬದಿಯಲ್ಲಿ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ದನಗಳನ್ನು ತುಂಬಿಸಿಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಾಹನ ಸಹಿತ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮುಜಾಫಿರ್ ಹಾಗೂ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳು ಜುಲೈ 20ರಂದು ನೀಲಿ ಬಣ್ಣದ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಕಪ್ಪು ಬಣ್ಣದ ದನವನ್ನು ಹೊಡೆದು ಬಡಿದು ಹಗ್ಗವನ್ನು ಕಟ್ಟಿ ತುಂಬುತ್ತಿದ್ದು, ಸ್ಥಳೀಯ ಸುದೀಪ್ ಎಂಬುವರು ಬೈಕಿನಲ್ಲಿ ಬರುತ್ತಿದ್ದುದನ್ನು ಗಮನಿಸಿ, ದನವನ್ನು ಕಾರಿಗೆ ತುಂಬಿತ್ತಿದ್ದ ಮೂರು ಜನರಲ್ಲಿ, ಒಬ್ಬನು ಸ್ಥಳದಿಂದ ಓಡಿ ಹೋಗಿದ್ದು, ಇಬ್ಬರು ದನ ತುಂಬಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು. ಆರೋಪಿಗಳು ದನವನ್ನು ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ, ದನಕ್ಕೆ ಹಗ್ಗವನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಿ ಮಾಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮುಜಾಫಿರನನ್ನು ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹೈಕಾಡಿ ಎಂಬಲ್ಲಿ ಬಂಧಿಸಿದ್ದು, ಕೃಷ್ಣ ನಾಯ್ಕನನ್ನು ನೀರ್ಜಡ್ದು 33 ಶಿರೂರಿನಲ್ಲಿ ದಸ್ತಗಿರಿ ಮಾಡಲಾಗಿದೆ. ಇನ್ನೊಬ್ಬ ಆರೋಪಿಯು ತಲೆಮರಿಸಿಕೊಂಡಿದ್ದಾನೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.