ಅಡ್ಡ ಬಂದ ನಾಯಿ – ಗಾಯಗೊಂಡ ಬೈಕ್ ಸವಾರರು

ಕುಂದಾಪುರ: ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಸಿದ್ಧಾಪುರ ಗ್ರಾಮದ ಹೆನ್ನಾಬೈಲು ಮಸೀದಿಯಿಂದ ಸ್ವಲ್ಪ ಮುಂದೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರನ್ನು ಹೊಸಂಗಡಿ ಗ್ರಾಮದ ಚಂದು (70) ಹಾಗೂ ಅವರ ಮೊಮ್ಮಗ ಗುಣಕರ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ 7.30 ರ ಸುಮಾರಿಗೆ ಗುಣಕರ ತಮ್ಮ ಬೈಕಿನಲ್ಲಿ ಚಂದು ಅವರನ್ನು ಕುಳ್ಳಿರಿಸಿಕೊಂಡು ಅಂಪಾರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಹೆನ್ನಾಬೈಲು ಮಸೀದಿಯಿಂದ ಸ್ವಲ್ಪ ಮುಂದೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿರುವಾಗ ಬೀದಿನಾಯಿಯೊಂದು ಅಡ್ಡ ಬಂದಿದೆ. ತಕ್ಷಣ ಗುಣಕರ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ. ತಕ್ಷಣ ಸ್ಥಳೀಯರು ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸವಾರರಿಬ್ಬರಿಗೂ ಕೈಕಾಲುಗಳಿಗೆ ಗಾಯಗಳಾಗಿವೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
