ಬೀಜಾಡಿ: ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಂಸತ್ ರಚನೆ
ಕುಂದಾಪುರ: ಬೀಜಾಡಿ ಸರ್ಕಾರೀ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ ರಚನೆಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಸಲಾಯಿತು. ವಿದ್ಯುನ್ಮಾನ ಮತಯಂತ್ರ, ಚುನಾವಣಾ ಅಧಿಸೂಚನೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರ, ಚುನಾವಣಾ ದಿನಾಂಕ, ಮತಎಣಿಕೆ ದಿನಾಂಕ ಇತ್ಯಾದಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲಾಯಿತು. ಬೂತ್ ಮಟ್ಟದ ಅಧಿಕಾರಿಗಳಾಗಿ ವಿದ್ಯಾರ್ಥಿಗಳಾದ ನವ್ಯಾ, ವಂಶಿ, ಮತ್ತು ಭೂಮಿಕಾ ಮತದಾರ ವಿದ್ಯಾರ್ಥಿಗಳಿಗೆ ಗುರುತು ಚೀಟಿ ನೀಡಿದರು.

ಪ್ರಿಸೈಡಿಂಗ್ ಅಧಿಕಾರಿಯಾಗಿ ವಿದ್ಯಾರ್ಥಿನಿ ಸಹನಾ, ಮತದಾನ ಅಧಿಕಾರಿಯಾಗಿ ಸಾನ್ವಿ, ತ್ರಿಶಾ, ತನ್ಮಯಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕಿಯರಾದ ರಮ್ಯ ಹಾಗೂ ಲಿಖಿತಾ ಮತದಾನದ ಕಂಟ್ರೋಲ್ ಯುನಿಟ್‌ಗಳನ್ನು ನಿರ್ವಹಿಸಿದರು. ಎಡಗೈ ತೊರುಬೆರಳಿಗೆ ಅಳಿಸಲಾಗದ ಮಸಿ ಗುರುತು ಹಾಕಿಸಿಕೊಳ್ಳುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮುಕ್ತವಾಗಿ, ನ್ಯಾಯಸಮ್ಮತವಾಗಿ ತಮ್ಮ ಮತ ಚಲಾಯಿಸಿದರು. ಅಭ್ಯರ್ಥಿಗಳಾದ ದರ್ಶಿನಿ, ಶರಣ್, ಗಾನವಿ, ಮಣಿಕಂಠ ಮತ್ತು ನಯನ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ನಂತರ ಚುನಾವಣಾಧಿಕಾರಿಗಳು ವಿಜೇತ ಅಭ್ಯರ್ಥಿಗಳನ್ನು ಘೋಷಿಸಿ ಪ್ರಮಾಣ ಪತ್ರ ನೀಡಿದರು. ಶಾಲಾ ನಾಯಕನಾಗಿ ಹತ್ತನೇ ತರಗತಿಯ ಕುಮಾರ ಶ್ರವಣ್ ಆಯ್ಕೆಯಾದರೆ, ಶಾಲಾ ಉಪನಾಯಕನಾಗಿ 9ನೇ ತರಗತಿಯ ಮಣಿಕಂಠ ಆಯ್ಕೆಯಾದರು. ಪ್ರಭಾರ ಮುಖ್ಯ ಶಿಕ್ಷಕಿ ಅರ್ಪಣಾ ಬಾಯಿ ರಾಷ್ಟ್ರಪತಿಯಾಗಿ ಸಂಸತ್ತಿನ ಸಭಾಪತಿ ವಿದ್ಯಾರ್ಥಿನಿ ನವ್ಯಾ ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಸಭಾಪತಿಯವರು ಶಾಲಾ ನಾಯಕ, ಉಪನಾಯಕ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಹಾಗೂ ವಿರೋಧ ಪಕ್ಷದ ಸದಸ್ಯರಿಗೆ ಶಾಲಾ ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವುದಾಗಿ ಪ್ರಮಾಣವಚನ ಬೋಧಿಸಿದರು.

ಪ್ರತಿಪಕ್ಷ ನಾಯಕಿಯಾಗಿ ಹತ್ತನೇ ತರಗತಿಯ ಕುಮಾರಿ ದರ್ಶಿನಿ ಆಯ್ಕೆಯಾದರು. ನೂತನ ಶಾಲಾ ಸಂಸತ್‌ನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅರ್ಪಣಾ ಬಾಯಿ, ಇಂದಿನ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ತತ್ವ ಮತ್ತು ಸಿದ್ಧಾಂತಗಳನ್ನು ಶಾಲಾ ಜೀವನದಲ್ಲಿಯೇ ಅಳವಡಿಸಿಕೊಳ್ಳುವಲ್ಲಿ ಶಾಲಾ ಸಂಸತ್ ರಚನೆ ಮಹತ್ವದ ಪಾತ್ರ ನಿರ್ವಹಿಸುತ್ತವೆ ಹಾಗೂ ಬಾವೀ ಜನಪ್ರತಿನಿಧಿಗಳಿಗೆ ಇಂತಹ ತರಬೇತಿ ಅಗತ್ಯ ಹಾಗೂ ಎಲ್ಲರೂ ಶಾಲಾ ಸಂವಿಧಾನಕ್ಕೆ ಬದ್ಧರಾಗಿ, ಶಾಲೆಯ ಗೌರವವನ್ನು ಉತ್ಕೃಷ್ಟಗೊಳಿಸಿ ಎಂದರು. ರಾಷ್ಟ್ರಪತಿ ಭಾಷಣದ ಮೇಲೆ ಪ್ರತಿಪಕ್ಷದ ನಾಯಕರ ವಂದನಾ ನಿರ್ಣಯದೊಂದಿಗೆ ಪ್ರಮಾಣವಚನ ಸಮಾರಂಭ ಮುಕ್ತಾಯಗೊಂಡಿತು. ಚುನಾವಣಾಧಿಕಾರಿಗಳಾಗಿ ಶಿಕ್ಷಕಿ ಭಾಗ್ಯಲಕ್ಷ್ಮಿ, ಮೈಕ್ರೋಅಬ್ಸರ್ವರ್ ಆಗಿ ಮಮತಾ, ತಾಂತ್ರಿಕ ಸಹಾಯಕರಾಗಿ ಪ್ರೇಮ, ಸೆಕ್ಟರ್ ಆಫೀಸರ್ ಆಗಿ ನಟರಾಜ್, ಸೆಕ್ಯೂರಿಟಿ ಚೀಫ್ ಆಗಿ ಉದಯ ಮೊಗವೀರ ಅವರು ಸಹಕರಿಸಿದರು. ಸಂಸತ್ ಚುನಾವಣಾ ಪ್ರಕ್ರಿಯೆಯನ್ನು ಶಿಕ್ಷಕ ಡಾ.ಸದಾನಂದ ಬೈಂದೂರ್ ನಿರ್ವಹಿಸಿದರು.
