ಕುಂದಾಪುರ: ಎಡಮೊಗ್ಗೆಯಿಂದ ಅಕ್ರಮ ಕೆಂಪು ಕಲ್ಲು ಸಾಗಾಟ – ಸೊತ್ತು, ವಾಹನ ಮತ್ತು ಚಾಲಕ ವಶಕ್ಕೆ
ಕುಂದಾಪುರ: ಅಕ್ರಮವಾಗಿ ವಾಹನವೊಂದರಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಿ ಸಾಗಿಸುತ್ತಿದ್ದ ಆರೋಪದ ಮೇಲೆ ಕೆಂಪುಕಲ್ಲು ಸಹಿತ ಲಾರಿ ಹಾಗೂ ಚಾಲಕನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಭೀಮಾ ಶಂಕರ್ ಸಿನ್ನೂರ ಅವರ ನೇತೃತ್ವದ ತಂಡ ಭಾನುವಾರ ಕರ್ತವ್ಯದಲ್ಲಿದ್ದಾಗ ಅಂಪಾರು ಕಡೆಯಿಂದ ಕಂಡ್ಲೂರು ಕಡೆಗೆ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಅಕ್ರಮವಾಗಿ ಮಿನಿ ಟಿಪ್ಪರ್ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ದೂಪದಕಟ್ಟೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ KA-20-B-7633 ನೇ ನಂಬ್ರದ ಮಿನಿ ಟಿಪ್ಪರ್ ವಾಹನದಲ್ಲಿ ಅಕ್ರಮವಾಗಿ 200 ಕೆಂಪು ಕಲ್ಲುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

ಚಾಲಕ ಶ್ರೀನಾಥ್ (37)ನನ್ನು ವಿಚಾರಿಸಿದಾಗ ಟಿಪ್ಪರ್ ಮಾಲಕ ನಾಗು ಎಂದು ತಿಳಿದು ಬಂದಿದ್ದು, ಕೆಂಪುಕಲ್ಲನ್ನು ಹೊಸಂಗಡಿಯ ಎಡಮೊಗ್ಗೆ ಎಂಬಲ್ಲಿಂದ ತುಂಬಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಕಲ್ಲು ಕತ್ತರಿಸುವ ಮೆಷಿನ್ , ಕೆಂಪು ಕಲ್ಲು ಕೀಳುವ ಮೆಷಿನ್ ಹಾಗೂ ಕೆಂಪುಕಲ್ಲು ಕಡಿಯುವ ಸ್ಥಳದಲ್ಲಿ ಬಳಸಿದ JCB ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
