ಕುಂದಾಪುರ: ದಲಿತರಿಗೆ ತಾರತಮ್ಯ – ಕುಂದು ಕೊರತೆ ಸಭೆಯಲ್ಲಿ ಆಕ್ರೋಶ
ಕುಂದಾಪುರ : ದಲಿತರ ಸಂಕಷ್ಟಕ್ಕೆ ಮಿಡಿಯುವ ಹಲವಾರು ಕಾನೂನುಗಳು ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಲಿತರು ನಿರಂತರ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂಬ ಆಕ್ರೋಶ ಕುಂದಾಪುರ ತಾಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಹಾಗೂ ಕುಂದುಕೊರತೆಗಳ ಚರ್ಚಾ ಸಭೆಯಲ್ಲಿ ಕೇಳಿ ಬಂದಿತು.

ದಲಿತ ಸಮುದಾಯದವರಿಗೆ ವಾಸ ಹಾಗೂ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕಾಗಿ ಸರ್ಕಾರಿ ಭೂಮಿ ನೀಡುವ ಸಂದರ್ಭ ಅಧಿಕಾರಿಗಳಿಗೆ ನೊರೆಂಟು ಕಾಯ್ದೆ-ಕಾನೂನುಗಳು ನೆನಪಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಕಡತ ಕಳುಹಿಸುವಾಗಲೂ ಕೆಲವು ಪ್ರಾಮುಖ್ಯ ದಾಖಲೆಗಳನ್ನು ಕಡತದಲ್ಲಿಡಲು ಮರೆಯುತ್ತದೆ. ಅದೇ ಶ್ರೀಮಂತರು ಇದೇ ಉದ್ದೇಶಕ್ಕಾಗಿ ಸರ್ಕಾರಿ ಕಚೇರಿಗೆ ಬಂದರೆ, ಎಲ್ಲವೂ ಸಮರ್ಪಕವಾಗಿರುತ್ತದೆ. ಯೇ ನಡೆಯುತ್ತದೆ. ಹೊಂಬಾಡಿ ಮಂಡಾಡಿಯಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ 15 ಸೆಂಟ್ಸ್ ಜಾಗ ಮೀಸಲಿರಿಸಲು ಮನವಿ ನೀಡಿ ವರ್ಷಗಳು ಕಳೆದರೂ, ಕಂದಾಯ ಇಲಾಖೆ ಸ್ಪಂದಿಸಲಿಲ್ಲ. ದಲಿತರಿಗೆ ಡೀಮ್ಡ್ ಅರಣ್ಯ ಎಂದು ಕ್ಯಾತೆ ತೆಗೆಯುವ ಅರಣ್ಯ ಇಲಾಖೆ, ಇತರ ಸಮುದಾಯದವರಿಗೆ ಹೇಗೆ ನಿರಾಕ್ಷೇಪಣೆ ನೀಡಿದೆ ಎಂದು ಕೆ.ಸಿ.ರಾಜು ಬೆಟ್ಟಿನಮನೆ ಪ್ರಶ್ನಿಸಿದರು.
ಪ್ರತಿ 3 ತಿಂಗಳಿಗೊಮ್ಮೆ ನಡೆಯಬೇಕಿದ್ದ ಕುಂದುಕೊರತೆ ಸಭೆ 14 ತಿಂಗಳಿಂದ ನಡೆದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಭೀಮಗರ್ಜನೆಯ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಆಕ್ರೋಶ ಹೊರಹಾಕಿದರು. ಆಕ್ಷೇಪಿಸಿದರು. 39 ಇಲಾಖೆಗಳ ಪ್ರತಿನಿಧಿಗಳು ಸಭೆಗೆ ಹಾಜರಾಗಬೇಕು ಎಂದಿದ್ದರೂ, ಕೇವಲ ಬೆರಳೆಣಿಕೆಯ ಇಲಾಖೆಯವರು ಮಾತ್ರ ಸಭೆಯಲ್ಲಿ ಪಾಲ್ಲೊಳ್ಳುತ್ತಿದ್ದಾರೆ. ಗೈರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಾಜ್ ಉಪ್ಪಿಕುದ್ರು ಆಗ್ರಹಿಸಿದರು. ಅಬಕಾರಿ, ಸಹಕಾರ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಂದ್ರಮ ತಲ್ಲೂರು ಹಾಗೂ ವಿಜಯ್ ಕೆ.ಎಸ್ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಹೇಳಿದರು. ನಿಗಧಿತ ಸಮಯಕ್ಕಿಂತ ಸಭೆ ವಿಳಂಬವಾಗಿ ಆರಂಭವಾದ್ದಕ್ಕೆ ತಾಲ್ಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘ ಅಧ್ಯಕ್ಷ ಗಣೇಶ್ ಕೊರಗ ಸಭೆಯಿಂದ ಹೊರನಡೆದರು. ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ದಲಿತ ಎಂಬ ಕಾರಣಕ್ಕೆ ಆಹ್ವಾನಿಸಿಲ್ಲ ಎಂದು ಉದಯ ಕುಮಾರ್ ತಲ್ಲೂರು ದೂರಿದರು.
ತಾಲ್ಲೂಕು ಪಂಚಾಯಿತಿಯ ಕಟ್ಟಡವನ್ನು ದಲಿತ ಸಮುದಾಯದವರ ಹೆಸರಿನಲ್ಲಿ ಬಾಡಿಗೆಗೆ ಪಡೆದುಕೊಂಡು ಬಳಿಕ, ಒಳ ಬಾಡಿಗೆಗೆ ಬೇರೆಯವರಿಗೆ ನೀಡಲಾಗುತ್ತಿದೆ ಎಂದು ಚಂದ್ರಮ ತಲ್ಲೂರು ಹೇಳಿದಾಗ ಪ್ರತಿಸ್ಪಂದಿಸಿದ ತಹಶೀಲ್ದಾರ್ ಮಲ್ಲಿಕಾರ್ಜನ್, ಅಂತಹ ಪ್ರಕರಣಗಳಿದ್ದಲ್ಲಿ ಪರಿಶೀಲಿಸಿ, ಟೆಂಡರ್ ನಿಯಮ ಉಲ್ಲಂಘನೆ ಮಾಡಿದವರ ಟೆಂಡರ್ ರದ್ದು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗಂಗೊಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದವರೇ, ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿದ್ದು ಇನ್ನೂ ತೆರವು ಮಾಡಿಲ್ಲ ಎಂದು ಆನಂದ್, ಜಗದೀಶ್ ಮೊದಲಾದವರು ಗಮನಕ್ಕೆ ತಂದರು..
ಕಂದಾಯ ಇಲಾಖೆ ಉದ್ದೇಶಪೂರ್ವಕವಾಗಿ ದಲಿತರ ಕಡತಗಳ ದಾಖಲೆಗಳನ್ನು ಮುಂದಕ್ಕೆ ಕಳುಹಿಸುವುದಿಲ್ಲ ಎಂದು ಜಿಲ್ಲಾ ದೌರ್ಜನ್ಯ ಜಾಗೃತಿ ಸಮಿತಿ ಸದಸ್ಯ ವಾಸುದೇವ ಮುದ್ದೂರು ಆಪಾದಿಸಿದರು. ಮುಖಂಡ ಮೋಹನಚಂದ್ರ ಕಾಳಾವರ್ಕರ್ ಮಾತನಾಡಿ, ಪ್ರತಿ ಬಾರಿಯೂ ತಹಶೀಲ್ದಾರ್ ಆಗಿ ಬಂದವರು ಈ ರೀತಿಯ ಒಂದು ಸಭೆಯನ್ನಷ್ಟೇ ನಡೆಸುತ್ತಾರೆ. ಇನ್ನೊಂದು ಸಭೆ ನಡೆಸುವ ಮೊದಲೇ ಅವರು ವರ್ಗವಾಗಿರುತ್ತಾರೆ. ಇದರಿಂದ ಸಭೆಯಲ್ಲಿ ಪ್ರಾಸ್ತಾಪವಾಗಿರುವ ವಿಚಾರಗಳು ಚರ್ಚೆಯ ರೂಪದಲ್ಲಿರುತ್ತದೆ ಹೊರತು, ಅನುಷ್ಠಾನಕ್ಕೆ ಬರುವುದಿಲ್ಲ.ಹಾಗಾಗಿ ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳ ಪರಿಹಾರವನ್ನು ನಿರ್ಣಯ ರೂಪದಲ್ಲಿ ದಾಖಲಿಸಬೇಕು ಎಂದರು. ಈಗಾಗಲೇ ಗಮನಕ್ಕೆ ತಂದ ಪ್ರಕರಣಗಳನ್ನು ಏನು ಮಾಡಿದಿರಿ ಎಂದು ಗೋಪಾಲಕೃಷ್ಣ ಕುಂದಾಪುರ ಪ್ರಶ್ನಿಸಿದರು. ಕಾನೂನು ಎಲ್ಲರಿಗೂ ಒಂದೇ, ಕೆಲವೊಂದು ಅರ್ಜಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಸ್ವಷ್ಟನೆ ಕೇಳಿದ್ದು, ಈ ವಾರದಲ್ಲಿ ಪೂರಕ ಸ್ವಷ್ಟನೆ ನೀಡಿ ಇತ್ಯರ್ಥ ಮಾಡಲಾಗುವುದು. ನಿರ್ದಿಷ್ಟ ಪ್ರಕರಣಗಳಿದ್ದರೆ ಗಮನಕ್ಕೆ ತನ್ನಿ ಸೂಕ್ತ ಕ್ರಮ ಕೈಗೊಳ್ಳೋಣ ಎಂದು ತಹಶೀಲ್ದಾರ್ ಭರವಸೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಮಲ್ಲಿಕಾರ್ಜುನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್ ಇದ್ದರು.
