ಒಕ್ಕೂಟ ಆಯವ್ಯಯದಲ್ಲಿ ಶಿಕ್ಷಣ ಹಕ್ಕಿನ ಪ್ರಸ್ತಾವನೆಯೇ ಇಲ್ಲದಿರುವುದು ದುರದೃಷ್ಟಕರ – ನಿರಂಜನಾರಾಧ್ಯ
ಕುಂದಾಪುರ: ಕೇಂದ್ರದ ಹಣಕಾಸು ಸಚಿವರು ಮಂಡಿಸಿದ ಆಯವ್ಯಯದಲ್ಲಿ ಶಿಕ್ಷಣದಮೂಲಭೂತ ಹಕ್ಕಿನ ಪ್ರಸ್ತಾವನೆಯೇ ಇಲ್ಲದಿರವುದಿ ದುರದೃಷ್ಟಕರ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಸ್ಥಾಪಕ ಮಹಾಪೋಷಕ, ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ಡಾ.ನಿರಂಜನಾರಾಧ್ಯ ವಿ.ಪಿ. ಹಾಗೂ ಉಡುಪಿ ಜಿಲ್ಲಾಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಜಂಟೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಧ್ಯಂತರ ಬಜೆಟ್‌ನಲ್ಲಿ ನಾವು ಭರವಸೆ ನೀಡಿದ್ದು, ನಮ್ಮ ವಿಕಸಿತ ಭಾರತದಲ್ಲಿ ವಿವರವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ”. ಎನ್ನುತ್ತಾ
ಬಜೆಟ್‌ನಲ್ಲಿ 9 ಆದ್ಯತೆಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಶಿಕ್ಷಣದ ಪ್ರಸ್ತಾಪವೇ ಇಲ್ಲ. ಬಲಿಷ್ಟ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳದೆ ಬಲಿಷ್ಠ ಭಾರತ ಹಾಗು ಸರ್ವತೋಮುಖ ಅಭಿವೃದ್ಧಿ ಕಂಡುಕೊಳ್ಳಲು ಹೇಗೆ ಸಾಧ್ಯವೆಂಬುದು ಆಶ್ಚರ್ಯಕರ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.
2024-25 ನೇ ಆರ್ಥಿಕ ವರ್ಷದ ಆಯವ್ಯಯದ ಗಾತ್ರ 48,20,512 ಕೋಟಿ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಒಕ್ಕೂಟ ಸರ್ಕಾರವು , ರಾಷ್ಟ್ರೀಯ ಮಹತ್ವದ ಮತ್ತು ಸಂವಿಧಾನ ಬದ್ಧ ಮೂಲಭೂತ ಶಿಕ್ಷಣದ ಹಕ್ಕನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲು ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಮೀಸಲಿಟ್ಟಿರುವ ಹಣ ಕೇವಲ 37500 ಕೋಟಿ. ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಾದ ಹಣ ಕೇವಲ 46.53 ಕೋಟಿ. ಶೇಕಡಾವರು ಲೆಕ್ಕದಲ್ಲಿ ಒಟ್ಟು ಆಯವ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಸಿಕ್ಕಿರುವ ಹಣ ಕೇವಲ ಶೇಕಡ. 0.78. ಕಳೆದ ಆಯವ್ಯಯಕ್ಕಿಂತ ಈ ಆಯವ್ಯಯದಲ್ಲಿ ಹೆಚ್ಚಾದದ್ದು ಶೇಕಡ 0.12. ಸಮಗ್ರ ಶಿಕ್ಷಾ ಅಭಿಯಾನಕ್ಕೆ ಒಕ್ಕೂಟ ಸರ್ಕಾರ ನೀಡಿರುವ ಹಣಕಾಸನ್ನು ಸೂಕ್ಷ್ಮವಾಗಿ ಗಮನಿಸಿದರೆ , ಈ ಮಹತ್ವದ ಒಕ್ಕೂಟ ಪ್ರಾಯೋಜಿತ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೊಡ್ಡಮಟ್ಟದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ವಾಸ್ತವವಾಗಿ ಭಾರತದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಶಿಕ್ಷಣದ ಜವಾಬ್ದಾರಿಯನ್ನು ಹೊಂದಿವೆ. ರಾಜ್ಯ ಸರ್ಕಾರಗಳು ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಾ ಅಭಿಯಾನಕ್ಕೆ ರೂ.37,500 ಕೋಟಿಗಳನ್ನು ಒದಗಿಸಿದೆ. ಈ ಅತ್ಯಲ್ಪ ಮೊತ್ತವನ್ನು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಿದರೆ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಧ್ಯವಾಗದು ಎಂದು ಅಭಿಪ್ರಾಯಿಸಿದ್ದಾರೆ.
ಒಟ್ಟಾರೆಯಾಗಿ ಒಕ್ಕೂಟ ಸರ್ಕಾರದ ಈ ಆಯವ್ಯಯವು ರಾಜ್ಯ ಸರ್ಕಾರಗಳು ಮಕ್ಕಳ ಅಭಿವೃದ್ಧಿ ಹಕ್ಕುಗಳನ್ನು ಜಾರಿಗೆ ತರಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದರೂ, ಒಕ್ಕೂಟ ಸರ್ಕಾರವು ಅದರ ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಒಟ್ಟಾರೆ , ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರಗಳನ್ನು ಅಸಹಾಯಕ ಸ್ಥಿತಿಗೆ ತಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
