ನಾವುಂದ: ವಿದ್ಯುತ್ ತಗುಲಿ ಪೈಂಟರ್ ಸಾವು
ಕುಂದಾಪುರ; ವಿದ್ಯುತ್ ಶಾಕ್ ಹೋಡೆದು ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟ ಘಟನೆ ಜುಂ.26ರಂದು ನಾವುಂದದಲ್ಲಿ ಸಂಭವಿಸಿದೆ. ಗಂಗೊಳ್ಳಿ ನಾಯಕವಾಡಿ ನಿವಾಸಿ ಸಂದೀಪ್ (40) ಮೃತ ದುರ್ದೈವಿ.
ಅವಿವಾಹಿತರಾಗಿರುವ ಸಂದೀಪ್ ವಾಹನಗಳ ಚೆಸ್ಸಿಗಳಿಗೆ ಪೈಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದರು. ವರ್ಷಕ್ಕೆ ಒಂದು ಬಾರಿ ಎರಡು ತಿಂಗಳು ನಾವುಂದಕ್ಕೆ ಬಂದು ವಾಹನಗಳ ಚೇಸಿಗೆ ಪೈಂಟಿಂಗ್ ಮಾಡುವ ಕೆಲಸ ಮಾಡುತ್ತಿದ್ದ ಅವರು ಜು.25ರಂದು ಕೆಲಸಕ್ಕೆ ಬಂದಿದ್ದರು. ಕೆಲಸ ಪ್ರಾರಂಭ ಮಾಡುವ ಹೊತ್ತಿಗೆ ಪೈಂಟಿಂಗ್ ಮಾಡೋ ಕಂಪ್ರೆಷರ್ ಮಷೀನ್ ಕೈ ಕೊಟ್ಟಿತೆನ್ನಲಾಗಿದೆ. ಬಳಿಕ ದುರಸ್ತಿ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು. ಜು. 26ರಂದು ಬೆಳಗ್ಗೆ ಮಿಷನ್ ನೊಂದಿಗೆ ಬಂದಿದ್ದ ಅವರು ವಿದ್ಯುತ್ ಇಲ್ಲದೆ ಇರುವುದರಿಂದ ವಾಪಸ್ ಹೋಗಿದ್ದರು. ಮಧ್ಯಾಹ್ನ ಕೆಲಸ ಮಾಡಲು ಕಂಪ್ರೆಷರ್ ಮಷೀನ್ ಗೆ ವಯರ್ ಅಳವಡಿಸಿಕೊಂಡು ಕೆಲಸ ಮಾಡುವಾಗ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.

ಹೊರಗೆ ತಂದಿದ್ದೇ ತಪ್ಪಾಯ್ತು!?: ಕಂಪ್ರೆಸರ್ ಮಿಷನ್ ದುರಸ್ತಿ ಮಾಡಿ ಶೆಡ್ ಒಳಗೆ ಇಟ್ಟು ಹೋಗಿದ್ದ ಅವರು ಮಧ್ಯಾಹ್ನ ಅದನ್ನು ಹೊರಗಡೆ ತಂದು ಕೆಲಸ ಮಾಡಬೇಕು ಎಂದು ಹೊರಗೆ ಎಳೆದುಕೊಂಡು ಬರುತ್ತಿರುವಾಗ ಕಂಪ್ರೆಸರ್ ಮಿಷನ್ ಶಾರ್ಟ್ ಆಗಿ ವಿದ್ಯುತ್ ಪ್ರವಹಿಸಿ ಶಾಕ್ ಹೊಡೆದಿದೆ ಎನ್ನಲಾಗಿದೆ.
ಹೊರಗಡೆ ನೀರು : ಶೆಡ್ ಒಳಗಡೆ ಇದ್ದ ಮಿಷನನ್ನು ಹೊರಗಡೆ ತರುತ್ತಿದ್ದ ಸ್ಥಳದಲ್ಲಿ ಮಳೆಯಿಂದಾಗಿ ನೀರು ನಿಂತುಕೊಂಡಿತ್ತು. ಪವರ್ ಬಟನ್ ಆನ್ ಮಾಡಿ ಮಿಷನ್ ಹ್ಯಾಂಡಲ್ ಹಿಡಿದು ಹೊರ ಬರುತ್ತಿರುವಾಗ ಅವಘಡ ಸಂಭವಿಸಿದೆ. ಈ ಸಂದರ್ಭ ಅವರು ಚಪ್ಪಲಿ ಧರಿಸಿಲ್ಲವಾಗಿತ್ತು.
ಗೊತ್ತೇ ಆಗಿರಲಿಲ್ಲ: ಇದೇ ಸಂದರ್ಭ ಹೊರಗಡೆ ಇಬ್ಬರು ವಾಹನ ಚಾಲಕರು ನಿಂತಿದ್ದರು. ಆದರೆ ಅವರಿಗೆ ಯಾವುದೇ ಶಬ್ದ, ಕಿರುಚಾಟ ಕೂಡ ಕೇಳಿಸಲಿಲ್ಲ. ಸಂದೀಪ್ ಅವರು ಹೊರಗೆ ಬಾರದಿದ್ದುದನ್ನು ನೋಡಲು ಹೋದಾಗ ಅವಘಡ ಸಂಭವಿಸಿರುವುದು ತಿಳಿದು ಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
