ಕುಂದಾಪುರ: ಸ್ವಂತಕ್ಕೆ ಸತ್ತು ಸಮಾಜಕ್ಕೆ ಬದುಕುವವ ಪತ್ರಕರ್ತ – ಓಂ ಗಣೇಶ್
ಪತ್ರಿಕಾ ದಿನಾಚರಣೆ, ಜೀವವಿಮೆ, ಸನ್ಮಾನ

ಕುಂದಾಪುರ: ಆರಂಭದ ದಿನಗಳಿಂದಲೂ ಸಮಾಜವನ್ನು ಎಚ್ಚರಿಸುವ ಮೂಲಕ ತಿದ್ದುತ್ತಾ ಬರುತ್ತಿರುವ ಪತ್ರಕರ್ತರು ಸ್ವಂತಕ್ಕೆ ಸತ್ತು ಸಮಾಜಕ್ಕೆ ಬದುಕುತ್ತಾರೆ ಎಂದು ನಟ, ವಾಗ್ಮಿ, ಅಂತರ್ರಾಷ್ಟ್ರೀಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು.

ಅವರು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಜೇಸಿ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಟೈಪ್ ರೈಟರ್ ಯಂತ್ರದಲ್ಲಿ ಟೈಪಿಸಿ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಬದ್ಧತೆಯಿಂದ ಸಮಾಜದಲ್ಲಿ ತಿಳುವಳಿಕೆ ಮತ್ತು ಮಾಹಿತಿ ನೀಡುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ. ಪತ್ರಿಕೋದ್ಯಮ ಈಗ ಬದಲಾಗುತ್ತಿದೆ. ಸಹನೆಯಿಂದ ಆರಂಭವಾಗಿದ್ದ ಪತ್ರಕರ್ತರ ಬದುಕು ವೇಗದ ಮನಸ್ಥಿತಿಗೆ ಹೊರಳುತ್ತಿದೆ. ಸುತ್ತಲಿನ ನೋವಿಗೆ ಸ್ಪಂದಿಸುವ ಪತ್ರಕರ್ತನ ಆರ್ಥಿಕ ಸ್ಥಿತಿ ಮಾತ್ರ ಇನ್ನೂ ಸುಧಾರಣೆ ಆಗಿಲ್ಲ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗವನ್ನು ನಾಲ್ಕನೆ ಅಂಗವೆಂದು ಹೇಳುತ್ತೇವೆಯಾದರೂ ಪ್ರಾಥಮಿಕ ಶಾಲೆಯ ಶಿಕ್ಷಕರು ಪಡೆಯುವ ವೇತನವೂ ಪತ್ರಕರ್ತರಿಗೆ ಸಿಗುತ್ತಿಲ್ಲ. ಸಮಾಜ ಅಭಿವೃದ್ಧಿಗೆ ಸದಾ ಶ್ರಮಿಸುವ ಪತ್ರಕರ್ತರನ್ನು ಸಮಾಜವೇ ಪತ್ರಿಕಾ ದಿನಾಚರಣೆಗಳ ಆಚರಿಸುವ ಮೂಲಕ ಗೌರವಿಸುವ ಕೆಲಸ ಮಾಡಬೇಕಿತ್ತು ಎಂದರು.

ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರ ಕೆ.ಆರ್ ನಾಯ್ಕ್ ಮಾತನಾಡಿ, ಪತ್ರಕರ್ತರ ವೃತ್ತಿ ಮಹತ್ತವದ್ದು. ಸಮಾಜಕ್ಕೆ ಪತ್ರಿಕಾರಂಗದ ಕೊಡುಗೆಯೂ ಮಹತ್ತರದ್ದಾಗಿದೆ ಎಂದರು. ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗ್ರಾಮೀಣ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕು. ಪತ್ರಕರ್ತರು ತನ್ನ ವರದಿಯ ಮೂಲಕವೇ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ಕುಂದಾಪುರ ಅಂಚೆ ಇಲಾಖೆ ಎಎಸ್‌ಪಿ ಸತೀಶ್ ಹಾಗೂ ತಂಡವು ಭಾರತೀಯ ಅಂಚೆ ಇಲಾಖೆಯ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ, ಗ್ರಾಮೀಣ ಅಂಚೆ ವಿಮೆ, ಅಂಚೆ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅಪಘಾತ ವಿಮೆ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಿತು. ಇದೇ ಸಂದರ್ಭ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿಯವರನ್ನು ಪತ್ರಿಕಾ ದಿನದ ಪ್ರಯುಕ್ತ ಗೌರವಿಸಿ ಅಭಿನಂದಿಸಲಾಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಉಪಾಧ್ಯಕ್ಷ ಚಂದ್ರಮ ತಲ್ಲೂರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್.ಬೀಜಾಡಿ ಸ್ವಾಗತಿಸಿ, ವಂದಿಸಿದರು. ಪ್ರಶಾಂತ್ ಪಾದೆ ಸನ್ಮಾನ ಪತ್ರ ವಾಚಿಸಿದರು. ಶ್ರೀಕಾಂತ್ ಹೆಮ್ಮಾಡಿ ನಿರ್ವಹಿಸಿದರು.
