ಸ್ಪರ್ಧಾತ್ಮಕ ಯುಗದಲ್ಲಿ ಆದ್ಯಯನವೊಂದೆ ಮಂತ್ರವಾಗಲಿ : ಎಡಿಷನಲ್ ಎಸ್ಪಿ ಸಿದ್ಧಲಿಂಗಪ್ಪ
ಲಿಟ್ಲ್ ಸ್ಟಾರ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಮತ್ತು ಕಾನೂನು ಅರಿವು
ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾರು ಹೆಚ್ಚಿನ ಅಧ್ಯಯನ ಮಾಡುತ್ತಾರೋ ಅವರು ಖಂಡಿತವಾಗಿ ಯಶಸ್ವಿನ ಗುರಿಯನ್ನು ತಲುಪುತ್ತಾರೆ. ತಮಗೆ ಸಿಗುವ ಅಮೂಲ್ಯ ಸಮಯವನ್ನು ಅಧ್ಯಯನದತ್ತ ಕೇಂದ್ರೀಕರಿಸಿದಾಗ ಉತ್ತಮನಾಗರೀಕರಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಟಿ ಸಿದ್ದಲಿಂಗಪ್ಪ ಹೇಳಿದರು. ಅವರು ಲಿಟಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆದ ಈ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಢಿಸಿಕೊಂಡಾಗ ಮಕ್ಕಳ ಭವಿಷ್ಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ನಮ್ಮ ಕಾನೂನುಗಳನ್ನು ತಪ್ಪದೇ ಪಾಲಿಸಿ, ದೇಶಕ್ಕೆ, ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕಷನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಜ್ಞಾನ ಮತ್ತು ವ್ಯಕ್ತಿತ್ವವನ್ನು ಮಕ್ಕಳು ಮಾದರಿಗಾಗಿ ಅನುಸರಿಸಿದರೆ ಒಳ್ಳೆಯ ವ್ಯಕ್ತಿಗಳಾಗಿ ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಲು ಸಾಧ್ಯ ಎಂದರು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಥ ಸಂಚಲನದ ಮೂಲಕ ಅತಿಥಿಗಳು ಮತ್ತು ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳನ್ನು ವೇದಿಕೆಗೆ ಕರೆತರಲಾಯಿತು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಪ್ರದೀಪ್ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿ ದೀಕ್ಷಾ ನಿರೂಪಿಸಿ ಶಿಕ್ಷಕಿ ಸಪ್ತಮಿ ವಂದಿಸಿದರು.

