ಬೈಂದೂರು: ಸೋಮೇಶ್ವರದಲ್ಲಿ ಗುಡ್ಡ ಕುಸಿತ – ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಅಪಾಯದ ಆತಂಕ
ಗುಡ್ಡ ಕುಸಿದರೆ ಅಧಿಕಾರಿಗಳೇ ಹೊಣೆ ಎಂದ ಶಾಸಕ ಗಂಟಿಹೊಳೆ
ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಭಾರಿ ಮಳೆಯಿಂದಾಗಿ ಬೈಂದೂರು ಸಮೀಪದ ಒತ್ತಿನೆಣೆಯ ಸೋಮೇಶ್ವರ ಪಕ್ಕದ ಗುಡ್ಡ ಕುಸಿದಿದೆ. ಇದರಿಂದಾಗಿ ಪಡುವರಿ – ದೊಂಬೆ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಆತಂಕ ಎದುರಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಗುಡ್ಡ ನ್ನಷ್ಟು ಕುಸಿದು ಪಕ್ಕದಲ್ಲಿರುವ ರಸ್ತೆ ಹಾಗೂ ಮನೆಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಒತ್ತಿನೆಣೆಯ ಗುಡ್ಡವೂ ಕುಸಿಯುವ ಭೀತಿ ಎದುರಾಗಿದೆ. ಒಂದು ವೇಳೆ ಗುಡ್ಡ ಜರಿದರೆ ಉತ್ತರ ಕನ್ನಡ ಉಡುಪಿ ಸಂಪರ್ಕ ಕಡಿತಗೊಂಡು ನಿತ್ಯ ಸಂಚರಿಸುವ ಸಾವಿರರಾರು ಪ್ರಯಾಣಿಕರು ಅತಂತ್ರ ಸ್ಥಿತಿ ಎದುರಿಸಬೇಕಾಗುವುದಲ್ಲದೇ ಗುಡ್ಡದ ಮಣ್ಣು ಕೆಳಗಿನ ಕೃಷಿ ಪ್ರದೇಶಕ್ಕೆ ಹಾನಿ ಮಾಡುವ ಸಾಧ್ಯತೆಯೂ ದಟ್ಟವಾಗಿದೆ. ಐಆರ್ಬಿ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗಿತ್ತು. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತೀ ವರ್ಷ ಇಂತಹ ಗುಡ್ಡ ಕುಸಿತದ ಭೀತಿ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ವ್ಯವಸ್ಥಿತ ರೀತಿಯಲ್ಲಿ ಅಗತ್ಯ ಕಾಮಗಾರಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅಧಿಕಾರಿಗಳೇ ಅದಕ್ಕೆ ಜವಾಬ್ದಾರರು. ತಕ್ಷಣವೇ ತುರ್ತು ಕಾಮಗಾರಿ ನಡೆಸಬೇಕು ಎಂದು ಸೂಚಿಸಿದ್ದಾರೆ. ಗುಡ್ಡ ಜರಿದು ರಸ್ತೆ ಬ್ಲಾಕ್ ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಈ ಹಿಂದೆಯೇ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ ಕಾಮಗಾರಿಗೆ ಸಂಬಂಧಪಟ್ಟವರು ಹಾಗೂ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು ಎಂದು ಅವರು ಎಚ್ಚರಿಸಿದರು.
