ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರರಿಗೆ ಹೊಸ ಗುರುತು. ದೇಶದ ಗಮನ ಸೆಳೆಯುತ್ತಿರುವ ಸ್ವರಾಜ್ 75
ವಿಶೇಷ ವರದಿ
ಕುಂದಾಪುರ: ದೇಶಭಕ್ತಿ ಎಂದರೇನು ಎನ್ನುವುದಕ್ಕೆ ಹೊಸ ಭಾಷ್ಯ ಬರೆಯ ಹೊರಟಿದ್ದಾನೆ ಬಸ್ರೂರಿನ ಈ ಯುವಕ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಗುರುತಿಸಿ, ಅವರ ಮನೆಗೊಂದು ಗೌರವಯುತ ನಾಮಫಲಕ ಅಳವಡಿಸುವ ಮೂಲಕ ಹೋರಾಟಗಾರರಿಗೂ, ಅವರ ಕುಟುಂಬದವರಿಗೂ ವಿಶೇಷ ಗೌರವ ಸಲ್ಲಿಸುವ ಅಪರೂಪದ, ಆದರೆ ಮಾದರೀ ಕಾರ್ಯಕ್ರಮ ಹಮ್ಮಿಕೊಂಡಿದ್ದಾನೆ ಈ ಯುವಕ. ಇಂತಹಾ ಕಾರ್ಯಕ್ರಮದ ಹೆಸರೇ ಸ್ವರಾಜ್ 75.
ಬಸ್ರೂರಿನ ಪ್ರದೀಪ್ ಕುಮಾರ್ ಅತ್ಯಂತ ಬಡತನದ ಕುಟುಂಬದಿಂದ ಬಂದವನು. ಆದರೆ ದೇಶ ಭಕ್ತಿಯ ತುಡಿತ ಆತನ ರಕ್ತದಲ್ಲಿಯೇ ಬಂದಿದೆ. ತನ್ನದೇ ಯುವಕರ ಸ್ವರಾಜ್ 75 ಎನ್ನುವ ತಂಡ ಕಟ್ಟಿಕೊಂಡ ಪ್ರದೀಪ್, ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರ 250ಕ್ಕೂ ಹೆಚ್ಚು ಕುಟುಂಬಗಳನ್ನು ಪತ್ತೆ ಹಚ್ಚಿದ್ದು, ಆ ಪೈಕಿ ಈಗಾಗಲೇ 30 ಸ್ವಾತಂತ್ರ್ಯ ಹೋರಾಟಗಾರರ ಮನೆಗಳನ್ನು ಗುರುತಿಸಿ ಅವರ ಮನೆಗಳಿಗೆ ಭಾವಚಿತ್ರ ಸಹಿತ ಹೆಸರನ್ನೊಳಗೊಂಡ ನಾಮಫಲಕ ಅಳವಿಡಿಸಿರುವ ಸ್ವರಾಜ್ 75ರ ತಂಡದ ಮೂಲಕ ಇನ್ನುಳಿದ ಕುಟುಂಬಗಳನ್ನೂ ಸಂಪರ್ಕಿಸಿ ನಾಮಫಲಕ ಅಳವಡಿಸುತ್ತೇವೆ ಎನ್ನುತ್ತಾರೆ ಸಂಚಾಲಕ ಪ್ರದೀಪ್.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀಡಿರುವ ತಾಮ್ರಪತ್ರ, ಪಿಂಚಣಿ ದಾಖಲೆ, ಭೂದಾನದ ದಾಖಲೆ, ರೈಲ್ವೇ ಪಾಸ್, ಡಾ. ಸೂರ್ಯನಾಥ್ ಕಾಮತ್ ದಾಖಲೆ, ಗೌರವ ಚಿನ್ನದ ನಾಣ್ಯಪಡೆದ ದಾಖಲೆ, ರಾಜ್ಯಪಾಲರಿಂದ ವಾರ್ಷಿಕ ಹ್ವಾನ ಪಡದ ದಾಖಲೆ, ಜೈಲು ವಾಸದ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಆಧರಿಸಿ ಈ ನಾಮಫಲಕ ಅಳವಡಿಸಲಾಗುತ್ತಿದೆ.
ಸಂತೋಷ್ ನಾಯ್ಕ್, ಸಂತೋಷ್ ನೇರಳಕಟ್ಟೆ, ಸತೀಶ್ ಗುಂಡ್ಮಿ, ನವ್ಯಾ ಕುಂದಾಪುರ, ಅನನ್ಯಾ, ಅನುಷಾ ಶೆಟ್ಟಿ ಇಡೂರು ಸ್ವರಾಜ್ 75ರ ತಂಡದಲ್ಲಿದ್ದರೆ, ಪುರಾತತ್ವ ಇಲಾಖೆಯ ಪ್ರೊ.ಟಿ. ಮುರುಗೇಶ್, ನರೇಂದ್ರ ಕುಮಾರ್ ಕೋಟ ಮೊದಲಾದವರು ಮಾರ್ಗದರ್ಶನ ನೀಡುತ್ತಿದ್ದಾರೆ. ಅತ್ಯಂತ ಹಳೆಯ ಶಿಲಾಶಾಸನಗಳನ್ನು ಪತ್ತೆ ಹಚ್ಚಿ ಅಧ್ಯಯನ ನಡೆಸುತ್ತಿದ್ದಾನೆ. ಇದರ ಜೊತೆಗೆ ಅತ್ಯಂತ ಹಳೆ ದೇವಸ್ಥಾನಗಳನ್ನೂ ಪುನರುಜ್ಜೀವನಗೊಳಿಸುವ ಕೆಲಸಕ್ಕೂ ಕೈಹಾಕಿ ಯಶಸ್ಸು ಕಂಡಿದ್ದಾನೆ. ಸ್ವರಾಜ್ 75ರ ಸಾಧನೆ ಇಡೀ ದೇಶಕ್ಕೇ ಮಾದರಿಯಾಗಲಿ ಎಂದು ವಾಸ್ತವ.ಕಾಂ ಹಾರೈಸುತ್ತದೆ.
