ಕುಂದಾಪುರ: ಜುಲೈ 12ರಿಂದ ಜುಲೈ 14ರವರೆಗೆ ಪ್ರಥಮ ಹಲಸು ಮೇಳ
ಕುಂದಾಪುರ: ಪರಿಸರದ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಹಾಗೂ ಸಣ್ಣ ಕೃಷಿ ಮತ್ತು ಗೃಹ ಕೈಗಾರಿಕೆ ಉತ್ಪನ್ನ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ನೇತೃತ್ವದಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಗೆಳೆಯರ ಬಳಗ ನಂದಿಬೆಟ್ಟು ಇವರ ಸಹಯೋಗದೊಂದಿಗೆ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ “ಹಲಸು ಹಾಗೂ ಕೃಷಿ ಮೇಳ 2024” ಜುಲೈ 12 ಶುಕ್ರವಾರದಿಂದ ಜುಲೈ 14 ಆದಿತ್ಯವಾರದ ತನಕ ಕುಂದಾಪುರದ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಜನನಿ ದಿನಕರ ಶೆಟ್ಟಿ ಹೇಳಿದರು. ಅವರು ಕುಂದಾಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಹಲಸು ಮೇಳದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆ, ಆಂಧ್ರದ ಮೊದಲಾದ ಭಾಗಗಳಿಂದ ಹಲಸು ಬೆಳೆಗಾರರು ಭಾಗವಹಿಸುತ್ತಿದ್ದಾರೆ. ಬಯಲು ಸೀಮೆಯ ಪ್ರಸಿದ್ಧ ಸಿಹಿ ಕೆಂಪು ಹಲಸು, ಚಂದ್ರ ಹಲಸು ಸೇರಿದಂತೆ ಅಪರೂಪದ ಹಲಸು ತಳಿಗಳ ಹಣ್ಣು ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಮಾವಿನಹಣ್ಣು, ರಂಬೂಟಾನ್, ಡ್ರ್ಯಾಗನ್ ಪ್ರುಟ್ಸ್ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಮಾರಾಟ ಮಳಿಗೆಗಳು, ಅತ್ಯಾಧುನಿಕ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಪ್ರದರ್ಶನ ಮತ್ತು ಮಾರಾಟ, ಹಣ್ಣುಗಳ ಕೊಯ್ಲು ಮತ್ತು ಸಂಸ್ಕರಣೆ, ಹಲಸಿನ ಹಣ್ಣಿನಿಂದ ತಯಾರಿಸುವ ಬಗೆ ಬಗೆ ತಿಂಡಿ ಮತ್ತು ಹಪ್ಪಳ ಸಂಡಿಗೆ, ಐಸ್ ಕ್ರೀಮ್, ಹಲಸಿನ ಹಣ್ಣಿನ ಖಾದ್ಯಗಳು, ಮಾವಿನ ಹಣ್ಣಿನ ತಿನಿಸುಗಳು, ಬೇರೆ ಬೇರೆ ಶೈಲಿಯ ಉಪ್ಪಿನಕಾಯಿಗಳು, ಪ್ರಸಿದ್ಧ ನರ್ಸರಿಗಳು, ಕೃಷಿಗೆ ಸಂಬಂಧಪಟ್ಟ ಮಳಿಗೆಗಳು, ಖಾದಿ ಮತ್ತು ಕೈಮಗ್ಗದ ಬಟ್ಟೆಗಳು, ಆಯುರ್ವೇದ ಉತ್ಪನ್ನಗಳು, ಚನ್ನಪಟ್ಟಣ ಗೊಂಬೆ, ಇಳಕಲ್ ಸೀರೆ ಮೊದಲಾದ ಅಪರೂಪದ ಮಳಿಗೆಗಳು ಇರುತ್ತವೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಸ್ಥಾಪಕಾಧ್ಯಕ್ಷ ಕಿರಣ್ ಕುಂದಾಪುರ ಹೇಳಿದರು.
ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಕಾರ್ಯದರ್ಶಿ ಶ್ರೀಧರ ಮಾತನಾಡಿ, ಈ ಹಲಸು ಮತ್ತು ಕೃಷಿ ಮೇಳದಲ್ಲಿ ಭಾಗವಹಿಸಲು ಈಗಾಗಲೇ 80 ಮಳಿಗೆಗಳು ನೊಂದಣಿಯಾಗಿದ್ದು, ಇನ್ನೂ 50ಕ್ಕೂ ಹೆಚ್ಚು ಕೃಷಿ, ಗೃಹ ಉಪಯೋಗಕ್ಕೆ ಸಂಬಂಧಪಟ್ಟ ಮಳಿಗೆಗಳು ನೊಂದಣಿಯಾಗುವ ಸಾಧ್ಯತೆ ಇದೆ ಎಂದರು. ಕೋಶಾಧಿಕಾರಿ ಜಗದೀಶ ವಾಸುದೇವ ಉಪಸ್ಥಿತರಿದ್ದರು.
