ಸಿದ್ಧಾಪುರ: ಗರಿಗೆದರಿದ ವಾರಾಹಿ – ಆ.15ರ ಬಳಿಕ ಜನಾಂದೋಲನಕ್ಕೆ ಸಿದ್ಧತೆ
ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ಹೋರಾಟ ಸಮಿತಿ ರಚನೆ

ಕುಂದಾಪುರ: ಸಾವಿರ ಕೋಟಿ ಗುರಿ ಮುಟ್ಟಿದರೂ ನೀರು ಸಿಗದ ವಾರಾಹಿ ಯೋಜನೆಯ ವಿರುದ್ಧ ಸಮಗಟಿತ ಹೋರಾಟಕ್ಕೆ ಬೈಂದೂರು ಜನತೆ ಸಜ್ಜಾಗಿದ್ದಾರೆ. ವಾರಾಹಿ ಯೋಜನೆಯಲ್ಲಿ ಉಂಡವರೆಷ್ಟೋ ತಿಂದವರೆಷ್ಟೋ. ಅಧಿಕಾರಿಗಳ ಸಹಿತ ಜನಪ್ರತಿನಿಧಿಗಳೂ ತಿಂದುಂಡು ಹೋಗಿ ಸಾವಿರ ಕೋಟಿಯ ಗುರಿ ದಾಟಿದರೂ ಫಲಿತಾಂಶ ಶೂನ್ಯವಾಗಿಯೇ ಉಳಿದಿರುವ ವಾರಾಹಿ ನದಿ ನೀರು ಯೋಜನೆಯ ಮೂಲಕ ಬೈಂದೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳ ಕೃಷಿ ಚಟುವಟಿಕೆಗೆ ವಾರಾಹಿ ನೀರು ಒದಗಿಸುವಂತೆ ತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲ ರೂಪಿಸಿಲು ಪೂರ್ವ ಸಿದ್ಧತೆ ಸಭೆ ಸಿದ್ಧಾಪುರದಲ್ಲಿ ನಡೆಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಸಭೆ ನಡೆದಿದ್ದಲ್ಲದೇ ಹೋರಾಟ ಸಮಿತಿ ರಚನೆಯಾಗಿರುವುದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಂತಾಗಿದೆ.

ಶಾಸಕ ಗಂಟಿಹೊಳೆ ಮಾತನಾಡಿ, ರಾಜ್ಯ ಸರ್ಕಾರ ವಾರಾಹಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಬೈಂದೂರಿನ ಯಾವುದೇ ಗ್ರಾಮಕ್ಕೆ ಇದರ ಪ್ರಯೋಜನ ಆಗುತ್ತಿಲ್ಲ. ವಾರಾಹಿ ನೀರು ಬೈಂದೂರಿನ ಗ್ರಾಮಗಳ ರೈತರ ಕೃಷಿ ಚಟುವಟಿಕೆಗೆ ಸಿಗಬೇಕು. ಈ ನಿಟ್ಟಿನಲ್ಲಿ ಜನಾಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲು ಸಮಿತಿ ರಚಿಸಲಾಗಿದೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೆ ಹೋಗುವಂತೆಯೇ ಬೈಂದೂರು ತಾಲೂಕಿಗೂ ನೀರು ಬರಬೇಕು. ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ವೇಗ ಸಿಗಬೇಕು. ವಾರಾಹಿ ಎಡದಂಡೆ ಯೋಜನೆಯ ಅನುಷ್ಠಾನದ ಮೂಲಕ ಕಾಲುವೆಗಳಿಂದ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಪೂರೈಕೆ ಆಗಬೇಕು. ಗ್ರಾಮ ಗ್ರಾಮಗಳಲ್ಲಿ ಜನಾಭಿಪ್ರಾಯ, ಮಾಹಿತಿ ಸಂಗ್ರಹಿಸಿ ಆಗಸ್ಟ್ 15ರ ಬಳಿಕ ಹೋರಾಟ ರೂಪಿಸಲು ಸಮಿತಿ ರಚನೆ ಮಾಡಲಾಗಿದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಮುಖರಾದ ಉಮೇಶ್ ಕಲ್ಗದ್ದೆ, ಸತೀಶ್ ಶೆಟ್ಟಿ, ಡಾ. ಅತುಲ್ ಕುಮಾರ್ ಶೆಟ್ಟಿ, ಪ್ರಾಣೇಶ್, ರವಿಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ, ಪ್ರಭಾಕರ ಕುಲಾಲ್, ಹಟ್ಟಿಯಂಗಡಿ ರಾಜೀವ್ ಶೆಟ್ಟಿ, ಹಕ್ಲಾಡಿ ಶುಭಾಶ್ ಶೆಟ್ಟಿ, ಹರ್ಕುರು ಮಂಜಯ್ಯ ಶೆಟ್ಟಿ, ಹರ್ಷ ಮೊಗವೀರ ಸಿದ್ದಾಪುರ, ಕೃಷ್ಣ ಪೂಜಾರಿ, ರವಿ ಕುಲಾಲ್ ಸೇರಿದಂತೆ ಸುಮಾರು 25 ಗ್ರಾಮ ಪಂಚಾಯತಿಗಳ ಮುಖಂಡರು ಭಾಗವಹಿಸಿ, ಯೋಜನೆಯ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.
