ಬೈಂದೂರು: ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಗಂಟಿಹೊಳೆ ಭೇಟಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಬೈಂದೂರು : ಪುನರ್ವಸು ಮಳೆಯ ಆರ್ಭಟ ಜೋರಾಗಿದ್ದು ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ನೆರೆ, ನೆರೆಭೀತಿ ಎದುರಾಗಿದ್ದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಂದೂರು ತಾಲೂಕಿನ ತಲ್ಲೂರು, ಕೋಟೆ ಬಾಗಿಲು ಬೈಲ್ ಮನೆ ವ್ಯಾಪ್ತಿಯಲ್ಲಿ ಪ್ರತಿವರ್ಷವೂ ನೆರೆಹಾವಳಿಯಿಂದ ಹಲವು ಸಮಸ್ಯೆ ಸೃಷ್ಟಿಯಾಗಿದೆ. ಪ್ರತಿ ಬಾರಿ ಮಳೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಜನತೆಯ ಸಮಸ್ಯೆಯನ್ನು ಈ ಬಾರಿ ಸ್ವತಃ ಶಾಸಕರೇ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ವಂಡ್ಸೆ ಗ್ರಾಮದ ಕೊಳ್ಕೆಗದ್ದೆ ಗೋವಿಂದ ಮೊಗವೀರರವರ ಮನೆಗೆ ನೀರು ನುಗ್ಗಿದ್ದು, ಶಾಸಕ ಗುರುರಾಜ್ ಗಂಟಿಗಹೊಳೆ ಭೇಟಿ ನೀಡಿ, ಸ್ಥಳಕ್ಕೆ ತಹಶೀಲ್ದಾರ್ ಅವರನ್ನು ಕರೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಶಾಶ್ವತ ಪರಿಹಾರ ಒದಗಿಸಲು ಸೂಚಿಸಿದರು.
ಶಾಸಕರ ಭೇಟಿ ಸಂದರ್ಭದಲ್ಲಿ ಪ್ರಮುಖರಾದ ವಂಡ್ಸೆ ದೀಪಕ್ ಶೆಟ್ಟಿ, ಕರಣ್ ಪೂಜಾರಿ, ಲಕ್ಷ್ಮೀರಾಜ್ ತಲ್ಲೂರು ಹಾಗೂ ಸ್ಥಳೀಯ ಕಾರ್ಯಕರ್ತರು, ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.

ನೆರೆಯಿಂದಾಗಿ ಇಡೀ ತಾಲೂಕಿಗೆ ಹಲವು ರೀತಿಯಲ್ಲಿ ಸಮಸ್ಯೆಯಾಗಿದೆ. ಅನೇಕರ ಮನೆಗೆ ನೀರು ನುಗ್ಗಿದೆ. ತೋಟಗಳಿಗೆ ಹಾನಿಯಾಗಿದೆ. ರಸ್ತೆ ಕುಸಿದಿದೆ. ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿ, ಪ್ರವಾಹ, ನೆರೆ ವಾತಾವರಣ ಸೃಷ್ಟಿಯಾಗಿದೆ. ಶಾಸಕ ಗುರುರಾಜ್ ಗಂಟಿಹೊಳೆ ಅವರು ತನ್ನೆಲ್ಲಾ ಖಾಸಗಿ ಸಭೆ/ಕಾರ್ಯಕ್ರಮಗಳನ್ನು ಬದಿಗೊತ್ತಿ ಕ್ಷೇತ್ರದಲ್ಲಿಯೇ ಇದ್ದು ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಜೊತೆಯಾಗುತ್ತಿರುವುದು ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.
