ಕುಂದಾಪುರ: ಬೋರ್ಗರೆದ ಮಳೆಗೆ ಮುಳುಗಿದ ಚಿಕ್ಕನ್ ಸಾಲ್ ರಸ್ತೆ – ಒಳಚರಂಡಿ ಸಮಸ್ಯೆಗಿಲ್ಲ ಮುಕ್ತಿ!
ಸಂಚಾರಕ್ಕೆ ಸಂಚಾಕಾರ
ಕುಂದಾಪುರ: ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕೂ ಮುನ್ನವೇ ಪೂರ್ವತಯಾರಿಗಳೆಲ್ಲ ಮುಗಿದು ಮಳೆಗೆ ಆಹ್ವಾನ ನೀಡಬೇಕಿದ್ದ ಕುಂದಾಪುರ ಪುರಸಭೆ ಮಾತ್ರ ಮಳೆ ಭೋರ್ಗರೆಯಲಾರಂಭಿಸಿದರೂ ಎಚ್ಚೆತ್ತುಕೊಂಡಿಲ್ಲ. ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ ಸೇರಿದಂತೆ ಹೆದ್ದಾರಿ ಸಂಪರ್ಕ ರಸ್ತೆಗಳ ಎರಡೂ ಬದಿಯ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಆದರೆ ಪುರಸಭೆಯ ಆಡಳಿತ ಮಾತ್ರ ಗಾಢ ನಿದ್ದೆಯಲ್ಲಿದೆ. ಇದರಿಂದಾಗಿ ನಿತ್ಯ ಪ್ರಯಾಣಿಕರ ಗೋಳು ಹೇಳ ತೀರದಾದರೆ ಫುಟ್ ಪಾತ್ ಪಾದಾಚಾರಿಗಳಿಗೆ ನರಕಯಾತನೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.




ಭಾನುವಾರ ಸುರಿದ ಮಳೆಗೆ ಕುಂದಾಪುರ ಮುಖ್ಯಪೇಟೆಯನ್ನು ಸಂಗಂನಿಂದ ಸಂಪರ್ಕಿಸುವ ಚಿಕ್ಕನ್ ಸಾಲ್ ರಸ್ತೆಯ ಎರಡೂ ಬದಿಗಳಲ್ಲಿ ಇರುವ ಚರಂಡಿಗಳು ತ್ಯಾಜ್ಯದಿಂದ ತುಂಬಿ ಮಳೆ ನೀರು ಹರಿವಿಗೆ ತಡೆಯಾದ ಪರಿಣಾಮ ಕೆಸರು ನೀರೆಲ್ಲ ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದಾಗಿ ಒಂದಷ್ಟು ಹೊತ್ತು ರಸ್ತೆ ಸಂಚಾರ ಸೇರಿದಂತೆ ಪಾದಚಾರಿಗಳ ಸಂಚಾರಕ್ಕೂ ಸಂಚಾಕಾರ ಉಂಟಾಯಿತು.




ಈ ಸಂದರ್ಭ ಸ್ಥಳೀಯ ಅಂಗಡಿಗಳ ಸಿಬ್ಬಂದಿಗಳು ಮುಚ್ಚಿದ ಚರಂಡಿಗಳನ್ನು ತೆರವಿಗೆ ಪ್ರಯತ್ನಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಳಚಂಡಿಗೆ ಅಳವಡಿಸಿದ ಸಿಮೆಂಟ್ ಹಲಗೆಗಳನ್ನು ಕಿತ್ತು ಹಾಕಲಾಗಿದ್ದು, ಮಳೆ ನೀರು ತುಂಬಿದಾಗ ಮತ್ತು ರಾತ್ರಿ ಹೊತ್ತಿನಲ್ಲಿ ಸಂಚರಿಸುವಾಗ ಅಪಾಯ ಆಹ್ವಾನಿಸುವಂತಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುತ್ತಾರೆಯೇ ಕಾದು ನೋಡಬೇಕಾಗಿದೆ.
