ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ : ಮಕ್ಕಳು ಸಾವು, ತಾಯಿ ಗಂಭೀರ
ಕುಂದಾಪುರ: ಮಾನಸಿಕವಾಗಿ ನೊಂದಿದ್ದ ತಾಯಿ ಒಬ್ಬಳು ತನ್ನ ಎರಡು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಮಕ್ಕಳು ಸಾವನ್ನಪ್ಪಿ ತಾಯಿ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ನಂದ್ರೋಳ್ಳಿ ಎಂಬಲ್ಲಿ ನಡೆದಿದೆ

ಘಟನೆಗೆ ಸಂಬಂಧಿಸಿದಂತೆ ಸಾವನ್ನಪ್ಪಿದ ಇಬ್ಬರು ಮಕ್ಕಳನ್ನು ನಂದ್ರೊಳ್ಳಿಯ ಸತೀಶ್ ಮಡಿವಾಳ ಹಾಗೂ ಶೀಲಾವತಿ ಎಂಬುವರ ಮಕ್ಕಳಾದ ಧನರಾಜ್ (13) ಹಾಗೂ ಛಾಯಾಶ್ರೀ(7) ಎಂದು ಗುರುತಿಸಲಾಗಿದೆ. ತಾಯಿ ಶೀಲಾವತಿ ಮಡಿವಾಳ (38) ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ನಂದ್ರೋಳ್ಳಿ ಮೂಡಮುಂದ ಎಂಬಲ್ಲಿನ ನಿವಾಸಿ ಶೀಲಾವತಿ ಮಡಿವಾಳ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಮಕ್ಕಳಾದ ಏಳನೇ ತರಗತಿ ವಿದ್ಯಾರ್ಥಿ ಧನರಾಜ್ ಹಾಗೂ ಒಂದನೇ ತರಗತಿ ಓದುತ್ತಿದ್ದ ಛಾಯಾಶ್ರೀಯನ್ನು ಕರೆದುಕೊಂಡು ಹೋಗಿ ಮನೆ ಸಮೀಪದ ಸುಮಾರು 200 ಮೀಟರ್ ದೂರದಲ್ಲಿರುವ ಗದ್ದೆಯ ಬಳಿಯ ಪಾಳು ಬಾವಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಸ್ಥಳಿಯರು ನೋಡಿ ರಕ್ಷಿಸುವ ಕಾರ್ಯಾಚರಣೆ ಮಾಡಿದ್ದು ಮೂವರನ್ನು ಮೇಲಕ್ಕೆತ್ತಿದ್ದಾರೆ. ಆದರೆ ಮಕ್ಕಳಿಬ್ಬರೂ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಅಸ್ವಸ್ಥ ಗೊಂಡಿದ್ದಾರೆ ಎಂದು ಕುಂದಾಪುರದ ಖಾಸಗೀ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಶೀಲಾವತಿಯ ಗಂಡ ಬಿಜಾಪುರದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು, ಮಕ್ಕಳೊಂದಿಗೆ ತಾಯಿ ಶೀಲಾವತಿ ಮಾತ್ರ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಮಕ್ಕಳಿಬ್ಬರೂ ವಂಡ್ಸೆ ಸರ್ಕಾರೀ ಶಾಲೆಗೆ ಹೋಗುತ್ತಿದ್ದು ಶನಿವಾರ ಮಧ್ಯಾಜ್ನ ಮನೆಗೆ ಬಂದ ಬಳಿಕ ತಾಯಿ ಮಕ್ಕಳನ್ನು ಕೆರೆಗೆ ದೂಡಿ ತಾನೂ ಅತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು , ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
