ಕುಂದಾಪುರ: ಹಿರಿಯ ಯೋಗ ಬಂಧು ಸಂಜೀವಣ್ಣ ವಿಧಿವಶ

ಕುಂದಾಪುರ : ಸಾವಿರಾರು ಶಿಷ್ಯಂದಿರಿಗೆ ಯೋಗ ಬಂಧುವಾಗಿದ್ದ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಬಳಿಯ ನಿವಾಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಬಂಧು ಸಂಜೀವಣ್ಣ(60) ಶನಿವಾರ ಮುಂಜಾನೆ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಉಡುಪಿಯ ಹಾವಂಜೆ ಗ್ರಾಮದ ಮೊಗೇರಿ ಎಂಬಲ್ಲಿ ಕೆ ಕೆ ಪೂಜಾರಿ ಹಾಗೂ ಪೂವಮ್ಮ ದಂಪತಿಯ ಪುತ್ರನಾದ ಸಂಜೀವಣ್ಣ ಪೂಜಾರಿ ಸಂಜೀವಣ್ಣ ಎಂದೇ ಪ್ರಸಿದ್ದರಾಗಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಕ್ಕಿಕಟ್ಟೆಯ ಜೈಹಿಂದ್ ಹಿ ಪ್ರಾ ಶಾಲೆ ಹೈಸ್ಕೂಲ್ ಶಿಕ್ಷಣವನ್ನು ಚೇರ್ಕಾಡಿಯ ಶಾರದ ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣವನ್ನು ಉಡುಪಿಯ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ ಮಣಿಪಾಲದ ಕೆ ಎಂ ಸಿಯಲ್ಲಿ ವೈದ್ಯಕೀಯ ದಾಖಲೆಗಳ ತಜ್ಞ ಕೋರ್ಸ್‌ನ್ನು ಮುಗಿಸಿ ಕೆಎಂಸಿ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ 1984ರಿಂದ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಯೋಗ ಚಿಕಿತ್ಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಜೀವಣ್ಣನವರ ನಿಧನಕ್ಕೆ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಆದರ್ಶ ಹೆಬ್ಬಾರ್, ಆಡಳಿತ ಹಾಗೂ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.
