ಬೈಂದೂರು: ಬಿಡಾಡಿ ದನಗಳ ಅಪಹರಣ- ಕ್ರಮಕ್ಕೆ ಆಗ್ರಹಿಸಿ ನಮೋ ಬಳಗ ಆಗ್ರಹ
ಬೈಂದೂರು: ಬೈಂದೂರು – ಶಿರೂರು ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳ ಕೊಟ್ಟಿಗೆಗೆ ನುಗ್ಗಿ ದುಷ್ಕರ್ಮಿಗಳಿಂದ ಜೀವ ಬೆದರಿಕೆಯೊಡ್ಡಿ ದನ ಕಳ್ಳತನ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೈಂದೂರಿನ ನಮೋ ಬಳಗ ತಹಶೀಲ್ದಾರ್ ಗೆ ಹಾಗೂ ಬೈಂದೂರು ಪೊಲೀಸ್ ಠಾಣೆಗೆ ಮನವಿ ಮಾಡಿದೆ.

ಕಳೆದ ಹಲವು ದಿನಗಳಿಂದ ಬೈಂದೂರು ಹಾಗೂ ಶಿರೂರು ಭಾಗದಲ್ಲಿ ರಸ್ತೆ ಬದಿಯಲ್ಲಿ ರಾತ್ರಿ ತಂಗುತ್ತಿದ್ದ ಜಾನುವಾರುಗಳನ್ನು ಅಪಹರಿಸಿ ಕದ್ದೊಯ್ಯುತ್ತಿರುವ ಬಗ್ಗೆ ಮಾಹಿತಿಗಳು ಬಹಿರಂಗಗೊಂಡಿದ್ದು ಈ ಹಿನ್ನೆಲೆಯಲ್ಲಿ ಬೈಂದೂರಿನ ನಮೋ ಬಳಗ ಬಿಡಾಡಿ ದನಗಳಿಗೆ ರಕ್ಷಣಾ ಒದಗಿಸಬೇಕು ಮತ್ತು ಅಕ್ರಮವಾಗಿ ಜಾನುವಾರುಗಳನ್ನು ಕದ್ದು ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಗುರುವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಶಿರೂರುಪೇಟೆಯ ಮಂಜುನಾಥ ಹೋಟೆಲ್ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ದುಷ್ಕರ್ಮಿಗಳು ಮಹೀಂದ್ರ ಎಕ್ಸ್ಯುವಿ 500 ವಾಹನದಲ್ಲಿ ಬಂದು ಬಲತ್ಕಾರವಾಗಿ ಕದ್ದೊಯ್ದಿದಿದ್ದಾರೆ. ಅಲ್ಲದೆ ಈ ಸಂದರ್ಭ ಸ್ಥಳೀಯ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ವಾರದ ಹಿಂದೆ ಶಿರೂರು ಮಾರ್ಕೆಟ್ ಅಂಡರ್ ಪಾಸ್ ಬಳಿ ಇರುವ ಗೋವುಗಳನ್ನು ಗೋವುಗಳನ್ನು ಹೊತ್ತೊಯ್ದಿದ್ದರು. ಬೈಂದೂರು, ಯಡ್ತರೆ, ಬಾಡ, ಸೂರೊಂದ. ಶಿರೂರು ಭಾಗಗಳಲ್ಲಿ ನಿರಂತರ ಕೊಟ್ಟಿಗೆಯಿಂದ ದನ-ಕರುಗಳು ಕಳುವಾಗುತ್ತಿದ್ದು, ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ನಾಗರೀಕರಲ್ಲಿ ಶಾಂತಿ, ನೆಮ್ಮದಿ ಹಾಳಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಕೃಷಿಯನ್ನೇ ನಂಬಿಕೊಂಡು ಬಂದ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಘಟನೆಗೆ ಕಾರಣರಾದ ದುಷ್ಕರ್ಮಿಗಳ ಮೇಲೆ ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ನಮೋ ಬಳಗ ಸಂಚಾಲಕ ಶ್ರೀಧರ ಬಿಜೂರು ಹಾಗೂ ತಂಡ ಆಗ್ರಹಿಸಿದೆ.
