ಕರಾವಳಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವೇನು?

ರಾಜಕೀಯ ವಿಶ್ಲೇಷಣೆ | ವಾಸ್ತವ.ಕಾಂ
ಕುಂದಾಪುರ: ಕಾಂಗ್ರೆಸ್ ನಿರೀಕ್ಷೆ ಉಡುಪಿ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಹುಸಿಯಾಗಿದೆ! ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ನುಡಿದ ಭವಿಷ್ಯ ನಿಜವಾಗಿದೆ! ಆದರೆ ಕ್ಷೇತ್ರ ಸಂದರ್ಶನದ ವೇಳೆ ನಡೆಸಲಾದ ಸಮೀಕ್ಷೆಗಳು ನೆಲಕಚ್ಚಿವೆ. ಚುನಾವಣಾ ಫಲಿತಾಂಶಗಳ ಬಳಿಕ ಉಡುಪಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿದ್ದ ಮಾಧ್ಯಮ ಸಮೀಕ್ಷೆಗಳು ತಲೆಕೆಳಗಾಗಿವೆ. ಹಾಗಿದ್ದರೆ, ಈ ಚುನಾವಣಾ ಫಲಿತಾಂಶಕ್ಕೆ ಕಾರಣಗಳೇನು?
ರಾಜಕೀಯ ವಿಶ್ಲೇಷಕರ ಪ್ರಕಾರ, ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಹೆಗ್ಡೆಯವರ ವೈಯುಕ್ತಿಕ ವರ್ಚಸ್ಸು ಶೇಖಡಾವಾರು ಮಾತ್ರ ಪರಿಣಾಮ ಬಿದ್ದಿದೆ. ಹೌದು, ಜಯಪ್ರಕಾಶ್ ಹೆಗ್ಡೆಯವರ ವೈಯುಕ್ತಿಕ ವರ್ಚಸ್ಸಿನ ಪರವಾಗಿ ಸಾಮಾಜಿಕ ಜಾಲತಾಣ ತಂಡ ಕೆಲಸ ಮಾಡಿತ್ತು. ಆದರೆ ಅದು ಕಾಂಗ್ರೆಸ್ಸಿನ ನಾಯಕರ ವಾಟ್ಸಾಪ್ ಗ್ರೂಫನ್ನು ಬಿಟ್ಟು ಹೊರಗೆ ಹೋಗಿರಲಿಲ್ಲ. ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರು ತಳಮಟ್ಟದವರೆಗೆ ಇಳಿದು ಕೆಲಸ ಮಾಡಿಲ್ಲ ಎನ್ನುವ ಆರೋಪವೂ ಇದೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಅಂತರವೂ ಮತಗಳಿಕೆಯಲ್ಲಿ ಪರಿಣಾಮ ಬೀರಿದ್ದೂ ಹೌದು.
ದಕ್ಷಿಣ ಕನ್ನಡ ಜಿಲ್ಲೆ ಹೇಳಿ ಕೇಳಿ ಹಿಂದುತ್ವದ ಭದ್ರಕೋಟೆ. ಅಲ್ಲಿ ಅಭಿವೃದ್ಧಿಗಿಂತ ಹಿಂದುತ್ವವೇ ದೊಡ್ಡ ಪಾಲು ಪಡೆದಿದೆ. ಅಂತಹಾ ಭದ್ರಕೋಟೆಯಲ್ಲಿ ಅಭಿವೃದ್ದಿಯ ಹೆಸರೇಳಿ ಮತ ಪಡೆಯುವುದು ಅಷ್ಟು ಸುಲಭವಲ್ಲ. ಇದೆಲ್ಲದರ ನಡುವೆ ಇಲ್ಲಿ ಮೇಲ್ನೋಟಕ್ಕೆ ಮಾತ್ರ ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತಿದೆಯೇ ಹೊರತು ವ್ಯಾವಹಾರಿಕವಾಗಿ ಎರಡೂ ಧರ್ಮಗಳ ಪಾಲುದಾರರು ರಾಜಕೀಯವಾಗಿ ಒಟ್ಟಾಗಿರುವುದೇ ಕಾಂಗ್ರೆಸ್ಸ್ ಅಭ್ಯರ್ಥಿಗೆ ದೊಡ್ಡ ಸವಾಲಾಗಿತ್ತು.
ಇನ್ನು ಕರಾವಳಿಯಲ್ಲಿ ಸಮರ್ಥ ಯುವ ನಾಯಕರ ಹಾಗೂ ಅಗ್ರೆಸ್ಸಿವ್ ಕಾರ್ಯಕರ್ತರ ಕೊರತೆ ಕರಾವಳಿ ಕಾಂಗ್ರೆಸ್ಸಿನ ಮೈನಸ್ ಪಾಯಿಂಟ್. ಹೆಸರಿಗಷ್ಟೇ ನಾಯಕರು ಎನ್ನಿಸಿಕೊಂಡ ಯುವ ನಾಯಕರು ಯುವ ಪಡೆಯನ್ನು ಸಂಘಟಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ನಾಯಕರ ಜೊತಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಹಾಗೂ ವಾಟ್ಸಾಪ್ ಗೆ ಸೀಮಿತವಾಗಿದ್ದು ದೊಡ್ಡ ನಿರ್ಲಕ್ಷ್ಯ. ಚುನಾವಣೆಯಲ್ಲಿ ಕಾರ್ಯಕರ್ತರು ಮತ್ತು ಮತದಾರರು ನಿರ್ಣಾಯಕ. ಬಿಜೆಪಿಯು ಕಾರ್ಯಕರ್ತರ ಮೂಲಕ ಮತದಾರರನ್ನು ಮುಟ್ಟಿದರೆ, ಕಾಂಗ್ರೆಸ್ ಮಾತ್ರ ಕಾರ್ಯಕರ್ತರನ್ನೇ ಮತದಾರರು ಎಂದು ಭಾವಿಸಿದ್ದು ಮತ್ತೊಂದು ಎಡವಟ್ಟು. ಸಾಮಾನ್ಯವಾಗಿ ಯಾವುದೇ ಪಕ್ಷದ ಕಾರ್ಯಕರ್ತರು ಮತದಾರನ ಮನೆ ಬಾಗಿಲಿಗೆ ಬಂದಾಗ “ಅಯ್ಯೋ ನಿಮ್ಮನ್ನು ಬಿಡುವುದುಂಟೇ” ಎನ್ನುತ್ತಾನೆ. ಅದನ್ನೇ ಕಾಂಗ್ರೆಸ್ ತಪ್ಪಾಗಿ ಭಾವಿಸಿದಂತಿದೆ.
ಇನ್ನು ಸರ್ಕಾರದ ಗ್ಯಾರೆಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿದ್ದರೂ, ಲೋಕಸಭಾ ಚುನಾವಣೆ ಬಳಿಕ ಅದು ನಿಂತುಹೋಗುತ್ತದೆ ಎನ್ನುವುದನ್ನು ಮತದಾರರ ಮನಸ್ಸಿನಲ್ಲಿ ಬಿಜೆಪಿ ಯಶಸ್ವಿಯಾಗಿ ನಾಟಿಸಿದೆ. ಆದರೆ ಅದನ್ನು ಬದಲಾಯಿಸುವಲ್ಲಿ ಮತ್ತು ಗ್ಯಾರೆಂಟಿಯ ಅಗತ್ಯತೆಯನ್ನು ಮತದಾರರಲ್ಲಿ ಮೂಡಿಸುವಲ್ಲಿ ಕಾಂಗ್ರೆಸ್ ನಾಯಕರು ಎಡವಿದ್ದೂ ಮತ್ತೊಂದು ಕಾರಣ ಎನ್ನಬಹುದು.
ಇದೆಲ್ಲದರ ನಡುವೆ ಚುನಾವಣೆಯನ್ನು ಚುನಾವಣೆ ರೀತಿಯಲ್ಲಿಯೇ ನಡೆಸಲು ಕಾಂಗ್ರೆಸ್ ವಿಫಲವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ರಾಜ್ಯ ಕಾಂಗ್ರೆಸ್ ನಾಯಕ ನಿಕೇತ್ ರಾಜ್ ಮೌರ್ಯ ಹೊರತುಪಡಿಸಿ ಮತ್ಯಾವ ರಾಜ್ಯ ನಾಯಕರೂ ಮತದಾರರನ್ನು ಮಾತನಾಡಿಸಿಲ್ಲದಿರುವುದರಿಂದ ಮತದಾರರಲ್ಲಿ ಗೊಂದಲ ಮೂಡಿದ್ದು ಸುಳ್ಳಲ್ಲ. ಕನಿಷ್ಟಪಕ್ಷ ಉಸ್ತುವಾರಿ ಸಚಿವೆಯೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ. ಕಾಂಗ್ರೆಸ್ನಲ್ಲಿ ಎಷ್ಟೇ ಒಳ್ಳೆ ಅಭ್ಯರ್ಥಿಯಿದ್ದರೂ, ಸರಿಯಾದ ಬೆಂಬಲ ಇಲ್ಲದೇ ಇದ್ದರೆ ಏನಾಗಬಹುದು ಎನ್ನುವುದು ಈ ಬಾರಿಯ ಚುನಾವಣಾ ಫಲಿತಾಂಶ ತೋರಿಸಿಕೊಟ್ಟಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ರಾಜ್ಯ ನಾಯಕರಲ್ಲಿದ್ದ ಓವರ್ ಕಾನ್ಫಿಡೆನ್ಸ್! ಗ್ಯಾರೆಂಟಿ ಕೈ ಹಿಡಿಯುತ್ತೆ ಎಂದು ನಂಬಿದ್ದ ಕಾಂಗ್ರೆಸ್ ಗೆ ಗ್ಯಾರೆಂಟಿ ಕೈಕೊಟ್ಟಿದೆಯಾ ಅಥವಾ ಅದನ್ನು ಸರಿಯಾಗಿ ಮತದಾರರಿಗೆ ತಲುಪಿಸಬೇಕಿದ್ದ ಸ್ಥಳೀಯ ನಾಯಕರು ಕೈಕೊಟ್ಟಿದ್ದಾರಾ? ಗೊತ್ತಿಲ್ಲ. ಅಂತೂ ಮತದಾರರು ಗ್ಯಾರೆಂಟಿಯನ್ನು ಕೈಬಿಟ್ಟಿದ್ದು ಮಾತ್ರ ಸತ್ಯ. ಇನ್ನಾದರೂ ಕಾಂಗ್ರೆಸ್ ನಾಯಕರು ತನ್ನವರಿಗೆ ನಾಯಕತ್ವ ನೀಡುವುದನ್ನು ಬಿಟ್ಟು ಸಕ್ರಿಯ ಮತ್ತು ಪ್ರಾಮಾಣಿಕ ಕಾರ್ಯಕರ್ತರನ್ನು ಸಮೀಕ್ಷೆ ನಡೆಸಿ ಆಯ್ಕೆ ಮಾಡಿ, ಅವರಿಗೆ ಜವಾಬ್ಧಾರಿಯುತ ಟಾಸ್ಕ್ ಗಳನ್ನು ಈಗಿಂದಲೇ ನೀಡಿ ಅದರ ನಿಯಮಿತ ಫಾಲೋ ಅಪ್ ಮಾಡುವುದರ ಜೊತೆಗೆ, ರಿಸಲ್ಟ್ ಓರಿಯೆಂಟೆಡ್ ಆಗಿ ಕೆಲಸ ನಿರ್ವಹಿಸಿದರೆ ಮುಂದಿನ ಅವಧಿಗಾದರೂ ಯಶಸ್ಸು ದೊರಕುವ ಸಾಧ್ಯತೆಗಳಿವೆ. ಇದರ ಜೊತೆಗೆ ಸೆಕೆಂಡ್ ಜನರೇಶನ್ ಲೀಡರ್ ಶಿಪ್ ಬೆಳೆಸುವಲ್ಲಿ ಪಕ್ಷದ ನಾಯಕರು ಮನಸ್ಸು ಮಾಡಬೇಕಿದೆ.
