BlogEducationHighlightsLocal newsOthersPoliticsState newsTrending

ಬೈಂದೂರು: ಪದವೀಧರರ‌ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ – ಎಸ್.ಎಲ್.ಬೋಜೇಗೌಡ

Aware others:

ಬೈಂದೂರು: ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಹೇಳಿದರು.‌ ಅವರು ಗುರುವಾರ ಬೈಂದೂರು ಮಂಡಲ ಬಿಜೆಪಿ ಕಚೇರಿಯಲ್ಲಿ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕರೆಯಲಾದ ಕಾರ್ಯಕರ್ತರ ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದರು.

ಶಿಕ್ಷಕರು ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಧ್ವನಿಯಾಗಿ ಮೇಲ್ಮನೆಯಲ್ಲಿ ಕೆಲಸ ಮಾಡಲಿದ್ದೇನೆ. ಎನ್ ಪಿಎಸ್ ಬದಲು ಒಪಿಎಸ್ ಅನುಷ್ಠಾನಕ್ಕೆ ಗಟ್ಟಿ ಧ್ವನಿಯಾಗುತ್ತೇನೆ. ಶಿಕ್ಷಕರಿಗೆ ಅಗತ್ಯ ಸೌಲಭ್ಯ, ಸೇವಾ ಭದ್ರತೆಯನ್ನು ಸರ್ಕಾರ ಒದಗಿಸಬೇಕು ಎಂದರು.

ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ‌ಪದವೀಧರರನ್ನು ನೀಡುತ್ತಿರುವ ಉಡುಪಿ ಜಿಲ್ಲೆ ಶೈಕ್ಷಣಿಕ ಹಬ್ ಆಗಿ ಬೆಳೆದಿದೆ. ಶಿಕ್ಷಣ, ಆರೋಗ್ಯ ಹಾಗೂ ಬ್ಯಾಂಕಿಂಗ್ ಸೇರಿದಂತೆ ಸೇವಾ ವಲಯದಲ್ಲೂ ಮುಂದಿದೆ.  ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಬರಬೇಕು. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸರ್ಕಾರದ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸಬೇಕು. ಪದವೀಧರರಿಗೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುವಂತೆ ಪ್ರದಾನಿ ಮೋದಿಯವರ ನೇತೃತ್ವದ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಮೂಲಕ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ಸರ್ಕಾರ ಮತ್ತು ಪದವೀಧರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಕಾಪಾಡಿಕೊಳ್ಳಲು ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಎರಡು ಸೀಟುಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಮತದಾರರ ಮನವೊಲಿಸಬೇಕು ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಈ ಚುನಾವಣೆಯನ್ನು ನಾವೆಲ್ಲರೂ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಎಲ್ಲರೂ ತಮ್ಮ ವಾರ್ಡ್ ಮತ್ತು ಪಂಚಾಯತ್ ವ್ಯಾಪ್ತಿಯಲ್ಲಿರುವ ಪದವೀಧರ, ಶಿಕ್ಷಕ ಮತದಾರರನ್ನು ಸಂಪರ್ಕಿಸಿ ಬಿಜೆಪಿ, ಎನ್‌ಡಿಎ ಅಭ್ಯರ್ಥಿಗೆ ಮತ ನೀಡುವಂತೆ ಮಾಡುವುದರ ಜೊತೆಗೆ ಮತದಾನದ ಅರಿವು ಮೂಡಿಸಿ ಯಾವುದೇ ಮತ ಅಸಿಂಧುವಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ರಾಜ್ಯ ಮಹಿಳಾ ಮೋರ್ಚಾದ ಶಿಲ್ಪಾ ಜಿ.ಸುವರ್ಣ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸೇರಿದಂತೆ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇


Aware others:

Leave a Reply

Your email address will not be published. Required fields are marked *

error: Content is protected !!