ಬೈಂದೂರು: ಮೇಲ್ಛಾವಣಿ ಕುಸಿತದ ಸ್ಥಳಕ್ಕೆ ಶಾಸಕ ಗಂಟಿಹೊಳೆ ಭೇಟಿ

ಬೈಂದೂರು: ಗುರುವಾರ ಸಂಜೆ ಸುರಿದ ಭಾರೀ ಗಾಳಿಮಳೆಗೆ ಯಡ್ತರೆ ಸಮೀಪದ ಕಳವಾಡಿ ಶ್ರೀ ಮಾರಿಕಾಂಬ ದೇವಸ್ಥಾನದ ಮೇಲ್ಛಾವಣಿ ಕುಸಿದು ಬಿದ್ದ ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಪರಿಶೀಲಿಸಿದರು.

ದೇವಸ್ಥಾನದ ಪ್ರಮುಖರು ಮತ್ತು ಸಂಬಂಧಪಟ್ಟ ಅಧಿಕಾರಿಗಳು, ತಹಶೀಲ್ದಾರ್ ಜೊತೆಗೆ ಶಾಸಕರು ಇದೇ ವೇಳೆ ಮಾತನಾಡಿದರು. ಯಾವ ರೀತಿಯಲ್ಲಿ ಪರಿಹಾರ ಕೊಡಿಸಬಹುದು ಎಂಬುದನ್ನು ಅಧಿಕಾರಿಗಳ ಜತೆ ಚರ್ಚಿಸಲಾಯಿತು. ನಂತರ ಪ್ರತಿಕ್ರಿಯಿಸಿದ ಶಾಸಕ. ಗಂಟಿಹೊಳೆ, ಮಳೆಗಾಲದಲ್ಲಿ ಆದಷ್ಟು ಎಚ್ಚರ ವಹಿಸಬೇಕಾದ ಅಗತ್ಯವಿದೆ. ಗಾಳಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಇಂತಹ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದು, ವಿದ್ಯುತ್ ಕಂಬ, ತಂತಿಗಳು ಹಾಗೂ ದೊಡ್ಡದೊಡ್ಡ ಮರದ ಕೆಳಗೆ ಗಾಳಿ ಮಳೆ ಸಂದರ್ಭದಲ್ಲಿ ನಿಲ್ಲಬಾರದು ಎಂದರು. ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಯರಾಮ್ ಶೆಟ್ಟಿ ಉಪ್ಪುಂದ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
