ಕುಂದಾಪುರ: ಮರದ ಕೊಂಬೆ ಬಿದ್ದು ವಾಹನಗಳು ಜಖಂ – ಚಾಲಕ ಗಂಭೀರ!

ಕುಂದಾಪುರ: ಇಲ್ಲಿನ ಮುಖ್ಯ ರಸ್ತೆಯ ಬದಿಯಲ್ಲಿದ್ದ ಬೃಹತ್ ಮರದ ಒಣ ಕೊಂಬೆ ಬಿದ್ದ ಪರಿಣಾಮ ಮರದಡಿಯಲ್ಲಿ ನಿಲ್ಲಿಸಿದ್ದ ಬಾಡಿಗೆ ಕಾರುಗಳು ಜಖಂಗೊಂಡು, ಒಬ್ಬ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಕುಂದಾಪುರದ ವಿನಯ ನರ್ಸಿಂಗ್ ಹೋಮ್ ಎದುರುಗಡೆ ನಡೆದಿದೆ. ಪಾರಿಜಾತ ಸರ್ಕಲ್ ನ ಟ್ಯಾಕ್ಸಿ ಸ್ಟ್ಯಾಂಡ್ ನ ಚಾಲಕ ರತ್ನಾಕರ್ ಶೇರಿಗಾರ್ (60) ಗಂಭೀರ ಗಾಯಗೊಂಡವರು.

ಮೊದಲ ದಿನ ಬಂದ ಮಳೆಗೆ ವಿನಯ ನರ್ಸಿಂಗ್ ಹೋಂ ಎದುರಿನ ಮರಸಲ್ಲಿ ಒಣಗಿದ್ದ ಕೊಂಬೆ ಒದ್ದೆಯಾಗಿ ಶಿಥಿಲಗೊಂಡಿತ್ತು. ಪರಿಣಾಮ ಬುಧವಾರ ಸಂಜೆ ಕೊಂಬೆ ಆಕಸ್ಮಿಕವಾಗಿ ದಿಢೀರನೆ ಬಿದ್ದಿದೆ. ಪರಿಣಾಮ ಮರದಡಿಯಲ್ಲಿರುವ ಟ್ಯಾಕ್ಸಿ ಸ್ಟಾಂಡ್ ನಲ್ಲೇ ನಿಂತಿದ್ದ ಕಾರು ಚಾಲಕ ರತ್ನಾಕರ್ ಅವರ ತಲೆ ಮೇಲೆ ಬಿದ್ದಿದೆ ಎನ್ನಲಾಗಿದೆ. ಇದರಿಂದ ಅವರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೇ ಪಕ್ಕದಲ್ಲಿಯೇ ನಿಲ್ಲಿಸಿದ್ದ ಕಾರುಗಳೂ ಹಾಗೂ ಒಂದು ಬೈಕ್ ಕೂಡಾ ಜಖಂಗೊಂಡಿವೆ.
ಟ್ಯಾಕ್ಸಿ ಚಾಲಕರು ರಸ್ತೆಬದಿಯ ಮರಗಳ ಒಣಗಿದ ಕೊಂಬೆಗಳನ್ನು ಕಡಿಯುವಂತೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಪುರಸಭೆ ಮಾತ್ರ ಸ್ಪಂದಿಸಿಲ್ಲ. ಇದರಿಂದಾಗಿ ಇನ್ನೆಷ್ಟು ಅನಾಹುತಗಳಾಗುತ್ತವೆಯೋ ಗೊತ್ತಿಲ್ಲ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
