ರಘುಪತಿ ಭಟ್ ಉಚ್ಛಾಟನೆಗೆ ಉಡುಪಿ ಜಿಲ್ಲಾ ಬಿಜೆಪಿ ಶಿಫಾರಸ್ಸು

ಉಡುಪಿ: ನಾನು ಈಗಲೂ ಬಿಜೆಪಿ ಮುಂದೆಯೂ ಬಿಜೆಪಿ ಎಂದು ಹೇಳುತ್ತಾ ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ತೊಡೆ ತಟ್ಟಿದ ುಡುಪಿಯ ಮಾಜೀ ಶಾಸಕ ರಘುಪತಿ ಭಟ್ ಗೆ ಉಡುಪಿ ಜಿಲ್ಲಾ ಬಿಜೆಪಿ ಬಿಸಿ ಮುಟ್ಟಿಸಲು ಹೊರಟಿದೆ. ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಸಾರಿರುವ ಮಾಜಿ ಶಾಸಕರಾದ ರಘುಪತಿ ಭಟ್ ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುವಂತೆ ಜಿಲ್ಲಾ ಬಿಜೆಪಿ ರಾಜ್ಯ ಸಮಿತಿಗೆ ಶಿಫಾರಸು ಮಾಡಿದೆ.
“ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವುದರಿಂದ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹಾಗಾಗಿ ರಘುಪತಿ ಭಟ್ ರನ್ನು ಉಚ್ಛಾಟಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಇದೇ ಸಂಬಂಧ ಪ್ರಕಟಣೆಯನ್ನೂ ನೀಡಿರುವ ಅವರು, ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯಾವುದೇ ಪದಾಧಿಕಾರಿಗಳು ಅಥವಾ ಕಾರ್ಯಕರ್ತರ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ. ಪಕ್ಷದ ತತ್ವ ಸಿದ್ಧಾಂತದಡಿ ಎಲ್ಲರೂ ಸಮಾನರಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರಗಿಸುವಂತೆ ಹೈಕಮಾಂಡಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಜಯಗಳಿಸಲಿದ್ದಾರೆ ಎಂದು ಹೇಳಿದರು.
